

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಸಹಮತ ವ್ಯಕ್ತಪಡಿಸಿರುವ ಸವೋಚ್ಚ ನ್ಯಾಯಾಲಯದ ಅಭಿಪ್ರಾಯಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಕೊರಮ, ಕೊರಚ, ಭೋವಿ (ವಡ್ಡರ), ಬಂಜಾರಾ (ಲಂಬಾಣಿ) ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯ ಮುಖಂಡ ಪಾಂಡುರಂಗ ಪಮ್ಮಾರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿದ್ದು, ಸ್ವೀಕಾರ್ಹವಾಗಿದೆ. ಸದ್ಯದಲ್ಲೇ 9 ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ. 7 ನ್ಯಾಯಾಧೀಶರನ್ನೊಳಗೊಂಡ ಸವೋಚ್ಚ ನ್ಯಾಯಾಲಯದ ಪೀಠವು ಒಳ ಮೀಸಲಾತಿಗೆ ಸಹಮತ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಒಂದು ಕಡೆ ದೇಶಾದ್ಯಂತ ಉಗ್ರ ಹೋರಾಟ ನಡೆಯಲಿದೆ. ಇನ್ನೊಂದು ಕಡೆ ಕಾನೂನು ಹೋರಾಟ ನಡೆಸಲಿದ್ದೇವೆ. ಸವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಸ್ವಾಗತಿಸಿ ಆ. 14ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಮಾದಿಗರ ವಿಜಯೋತ್ಸವದಲ್ಲಿ ನಮ್ಮ ಸಂಘಟನೆ ಭಾಗವಹಿಸುವುದಿಲ್ಲ. ಮಾದಿಗ ಸಮಾಜದ ಮುಖಂಡರು ತಮ್ಮನ್ನು ಭೇಟಿಯಾಗಿ ವಿಜಯೋತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು ಎಂದರು.
ಒಳ ಮೀಸಲಾತಿಯನ್ನು ಜಾರಿಗೊಳಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ. ಈ ವಿಷಯದಲ್ಲಿ ಪರಿಶಿಷ್ಟ ಜಾತಿಯ ನಾಯಕರು ಹಾಗೂ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಿಂದುಳಿಯಲು, ಸೂಕ್ತ ಪ್ರಾತಿನಿಧ್ಯ ಸಿಗದಿರುವ ಕುರಿತು ಸರ್ಕಾರದ ಬಳಿ ಸರಿಯಾದ ದತ್ತಾಂಶ ಇಲ್ಲ. ಹಾಗಾಗಿ ಈ ವಿಷಯದಲ್ಲಿ ಸರ್ಕಾರ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಶಶಿಕಾಂತ ಬಿಜವಾಡ, ಸುಭಾಸ ಮಲ್ಲಾಡದ, ಶಿವಾನಂದ ಕೊಣ್ಣೂರ ಇದ್ದರು.