

ಹರಿಹರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಮಹತ್ವವಿದ್ದು, ಕುಲಕಸುಬಿನ ಜತೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮುದಾಯ ಬಲಿಷ್ಠಗೊಳಿಸಬೇಕು ಎಂದು ಬಿಜಾಪುರ ತಂಗಡಗಿ ಮಠದ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಶ್ರೀಗಳು ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕಿನ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮುದಾಯದ ಸಂಘಟನೆ ಬಲಿಷ್ಠವಾಗಿದ್ದರೆ ಕರೆಯದಿದ್ದರೂ ಜನಪ್ರತಿನಿಧಿಗಳು ಬಂದು ಹೋಗುತ್ತಾರೆ. ಆದರೆ, ಹರಿಹರ ತಾಲೂಕು ಸಮಾಜದಲ್ಲಿ ಸಂಘಟನೆಯ ಕೊರತೆಯ ಪರಿಣಾಮ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಹೆಸರು ಮುದ್ರಿಸಿದ್ದರೂ ಕಾರ್ಯಕ್ರಮಕ್ಕೆ ಗೈರಾಗಿರುವುದು ಇದಕ್ಕೆ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಡಾ.ಕೆ.ಟಿ. ಮಲ್ಲೇಶಪ್ಪ ಮಾತನಾಡಿ, ಬಸವಣ್ಣನವರು ಶರಣರ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣ ಪ್ರಮುಖ ಪಾತ್ರವಹಿಸಿದ್ದರು. ಮೌಢ್ಯ ತೊಡೆದುಹಾಕಿ ಸಮಾನತೆ ಸಾರಿದರು. ಕುಲಕಸುಬಿನ ಬಗ್ಗೆ ವೃತ್ತಿ ಗೌರವ ಹೊಂದಿದ್ದ ಅವರು ಸ್ವಾಭಿಮಾನದಿಂದ, ಆತ್ಮ ಸಂತೋಷದೊಂದಿಗೆ ಬದುಕಿ ನಿಜಸುಖಿ ಎನಿಸಿಕೊಂಡರು ಎಂದರು.
ಕಾರ್ಯಕ್ರಮದಲ್ಲಿ ಅಣ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ದಾವಣಗೆರೆ ಬಸವ ಕಲಾಲೋಕದಿಂದ ಶರಣರ ವಚನ ಸಂಗೀತ ನಡೆಯಿತು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಎಚ್. ಹಾಲೇಶ್ ಹಡಪದ ವಹಿಸಿದ್ದರು.
ಜಿಲ್ಲಾ ಸಂಘದ ಅಧ್ಯಕ್ಷ ಶಶಿಧರ್, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜಪ್ಪ, ತಾಲೂಕು ಗೌರವಾಧ್ಯಕ್ಷ ಮಲ್ಲಪ್ಪ, ಮಲೇಬೆನ್ನೂರು ಚಿಕ್ಕಪ್ಪ, ಕುಂಬಳೂರು ಕೆ. ಮಾಂತೇಶಪ್ಪ, ಜಿಗಳಿ ಸ್ವಾಮಿಲಿಂಗಪ್ಪ, ಲೋಕೇಶ್ ಹಾವನೂರು, ಸಿದ್ದೇಶ್ ಹಡಪದ, ಸಂತೋಷ್, ಕೆ.ಟಿ. ಕೊಟ್ರೇಶ್, ಶಿವು ಹಡಪದ, ಆನಂದ ಹಡಪದ, ಕರಿಬಸಪ್ಪ ಭಾನುವಳ್ಳಿ, ನರಸಿಂಹಪ್ಪ, ಕಿರಣ್ ಹಾವನೂರು, ಹನುಮಂತಪ್ಪ ನಂದಿಗಾವಿ, ಹಾಲೇಶ್, ಪ್ರತಾಪ್, ಶಿವಪ್ಪ, ಕೊಟ್ರೇಶ್, ಭಾರತ್ ಬೆಳ್ಳೂಡಿ, ಬಸವರಾಜ್ ನಂದಿಗಾವಿ, ಕಿರಣ್, ಮಹಾಂತೇಶ್ ನಂದಿತಾವರೆ ಇತರರಿದ್ದರು.