ಆತ್ಮವಿಶ್ವಾಸದ ಪ್ರತೀಕ ಅಪ್ಪಣ್ಣಹೆಗ್ಡೆ

appanna
Published on

ಕುಂದಾಪುರ: ಅಪ್ಪಣ್ಣ ಹೆಗ್ಡೆ ಅವರು ನಿಂದನೆ, ಪ್ರಶಂಸೆಗಳನ್ನು ಸಮಾನವಾಗಿ ಸ್ವೀಕರಿಸಿದವರು. ಹಲವು ದಶಕಗಳ ಸಾಮಾಜಿಕ ಕ್ಷೇತ್ರದ ಸಕ್ರಿಯ ಸೇವೆಯಲ್ಲಿ ಯಾವುದೇ ಸ್ವಾರ್ಥ ಪರ ಚಿಂತನೆ ಮಾಡದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ, ಸಮತೋಲನ ಪ್ರಜ್ಞೆಯನ್ನು ಇಟ್ಟುಕೊಂಡ ಅಜಾತಶತ್ರು. ಪ್ರತಿಯೊಬ್ಬರ ಅಭಿಮಾನ, ಆತ್ಮವಿಶ್ವಾಸದ ಪ್ರತೀಕ ಅಪ್ಪಣ್ಣ ಹೆಗ್ಡೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಣ್ಣಿಸಿದರು.

ಬಸ್ರೂರಿನ ಬಿ.ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ವಕ್ವಾಡಿಯ ಗುರುಕುಲ ಶಿಕ್ಷಣ ಸಮುಚ್ಚಯದಲ್ಲಿ ಮಂಗಳವಾರ ಬಿ.ಅಪ್ಪಣ್ಣ ಹೆಗ್ಡೆ ಅವರ 90ನೇ ಜನ್ಮ ದಿನದ ಸಾರ್ವಜನಿಕ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಅಪ್ಪಣ್ಣ ಹೆಗ್ಗಡೆ ಅವರಲ್ಲಿ ವಂಚನೆ ಭಾವನೆ ಇಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾನ್ ಭಕ್ತ, ಅವರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಅನುಕರಣೀಯ. ಜೀವನದಲ್ಲಿ ತಾಳ್ಮೆ, ಸಹನೆ, ಪರೋಪಕಾರಿ ಚಿಂತನೆಗಳಿಂದ ಅಪ್ಪಣ್ಣ ಹೆಗ್ಡೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಎಲ್ಲ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿಕೊಳ್ಳುವ ಅಪ್ಪಣ್ಣ ಹೆಗ್ಡೆ ಅವರಂತಹ ವ್ಯಕ್ತಿತ್ವ ಬಹಳ ಅಗತ್ಯ ಎಂದರು.

ಸಾರ್ವಜನಿಕ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಬಿ.ಅಪ್ಪಣ್ಣ ಹೆಗ್ದೆ, ಮನುಷ್ಯ ವ್ಯವಸ್ಥಿತವಾಗಿ ಬದುಕು ಸಾಗಿಸಬೇಕಾದ ಅವಶ್ಯಕತೆ ಇದೆ. ಯುವಕರು ಈ ನಿಟ್ಟಿನಲ್ಲಿ ಯೋಚಿಸಬೇಕು. ಭಗವಂತ, ಗುರು ಹಿರಿಯರನ್ನು ಗೌರವಿಸಬೇಕು. ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಉತ್ತಮ ಕಾರ್ಯ ಮುಂದುವರಿಸಿಕೊಂಡು ಹೋಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಬಿ.ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಮಾತನಾಡಿ. ಅಪ್ಪಣ್ಣಹೆಗ್ಡೆ ಅವರ ಜೀವನ ಮೌಲ್ಯ ಕಿರಿಯರು ಅನುಸರಿಸಬೇಕು. ಅದನ್ನು ಜೀವಂತಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಊರಿಗೆ ಅಪ್ಪ- ಅಣ್ಣನ ಸ್ಥಾನದಲ್ಲಿರುವಂತಹ ಮಾರ್ಗದರ್ಶಕರು. ಸಮಾಜದ ಸಂಪತ್ತು ಆಗಿ ಬದುಕಿದವರು. ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು.ಸತ್ಯ, ನ್ಯಾಯ, ಧರ್ಮದ ಪರ ಜೀವನ ಪರ್ಯಂತ ಹೋರಾಟ.ಸಾಮಾಜಿ ಉನ್ನತಿಗಾಗಿ ಶ್ರಮಿಸಿದ ಅಪ್ಪಣ್ಣಹೆಗ್ಡೆ ಅವರ ಸಹನೆ, ತಾಳ್ಮೆ, ಸಮಾಜದ ಎಲ್ಲರೊಂದಿಗೂ ಬೆರೆಯುವ ಗುಣ ಶ್ಲಾಘನೀಯ. ಅವರು ಶತಾಯುಷಿಗಳಾಗಿ ನಮ್ಮನ್ನು ಮುನ್ನಡೆಸಲಿ ಎಂದು ಹಾರೈಸಿದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ, ಅಪ್ಪಣ್ಣ ಹೆಗ್ಡೆಯವರು ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನವಾದ ನಡೆ. ಸಮಾಜಮುಖಿಯಾಗಿ, ಜನತಾಪರ ನೈತಿಕೆಯನ್ನು ಉಳಿಸಿಕೊಂಡವರು. ಶಿಕ್ಷಣ ಸಂಸ್ಕೃತಿಯನ್ನು ಕಲಿಸಬೇಕು. ದೇಹಕ್ಕೆ ಮತ್ತು ಮನಸ್ಸಿಗೆ ಬರುವ ಎಲ್ಲ ಗುಣಗಳನ್ನು ಶಿಕ್ಷಣದಲ್ಲಿ ನೀಡಬೇಕು.ಕುಂದಾಪುರ ಕನ್ನಡವನ್ನು ಬೆಳೆಸಬೇಕು. ಸರ್ಕಾರ ಕೊಡುತ್ತದೆ ಎಂದು ಕಾದು ಕುಳಿತುಕೊಳ್ಳದೆ ಕುಂದಾಪ್ರ ಭಾಷೆಯನ್ನು ಬೆಳೆಸುವ ಪ್ರಯತ್ನ ನಡೆಯಬೇಕು ಎಂದರು.

ಬಿ.ಅಪ್ಪಣ್ಣ ಹೆಗ್ಡೆ ಅವರ 90ನೇ ಜನ್ಮ ದಿನದ ಪ್ರಯುಕ್ತ 90 ದೀಪಗಳನ್ನು ಬೆಳಗಿಸಲಾಯಿತು. ಕುಟುಂಬ ಸದಸ್ಯರು ಬಿ. ಅಪ್ಪಣ್ಣ ಹೆಗ್ಡೆ ಅವರಿಗೆ ಆರತಿ ಬೆಳಗಿದರು. ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಸಾದ ನೀಡಿ ಸಾರ್ವಜನಿಕ ಗೌರವಾರ್ಪಣೆ ಮಾಡಿದರು.

ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಸಾಧಕ ಪ್ರಶಸ್ತಿ ಪ್ರದಾನಿಸಲಾಯಿತು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದಿಂದ 2.90 ಲಕ್ಷ ರೂ. ಸಹಾಯಧನ ಮತ್ತು 247 ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಅನುಪಮ ಎಸ್.ಶೆಟ್ಟಿ ಸ್ವಾಗತಿಸಿದರು. ರಾಮರತನ್ ಹೆಗ್ಡೆ, ಭೋಜರಾಜ ಶೆಟ್ಟಿ ಬೈಂದೂರು, ಆನಂದ ಸಿ.ಕುಂದರ್ ಕೋಟ ಮತ್ತು ಟಿ.ಬಿ.ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯ ಶೆಟ್ಟಿ ಪಡುಕೆರೆ ಪ್ರಶಸ್ತಿ ಪತ್ರ ವಾಚಿಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ಪ್ರಸ್ತಾವನೆ ಮಾಡಿದರು. ಆರ್.ದಿನಕರ ಶೆಟ್ಟಿ ಫಲಾನುಭವಿಗಳ ವಿವರ ವಾಚಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಬಿ.ಕಿಶೋರ್ ಕುಮಾರ್ ಕುಂದಾಪುರ ವಂದಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸದಸ್ಯರಿಂದ ಭಜನಾ ಸಂಕೀರ್ತನೆ ಮತ್ತು ಜರ್ನಿ ಥೇಟರ್ ತಂಡದಿಂದ ’ಬೇಲಿ ಮುಳ್ಳಿನ ನೀಲಿ ಹೂಗಳು’ ರಂಗ ಗೀತೆ ಹಾಗೂ ಜಾನಪದ ಗೀತೆಗಳು ಪ್ರಸ್ತುತಿ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ’ನೃತ್ಯ ಸಂಗಮ’ ಹಾಗೂ ರಾತ್ರಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕೊಲ್ಲೂರು ಶ್ರೀ ಮೂಕಾಂಬಿಕೆ ನೃತ್ಯಗಾಥೆ ಹಾಗೂ ನೃತ್ಯಗಳನ್ನು ಒಳಗೊಂಡಿರುವ ಸಾಂಸ್ಕೃತಿಕ ರಸೋಲ್ಲಾಸ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net