

ಕೊಳ್ಳೇಗಾಲ: ಬಸವಣ್ಣನ ತತ್ವಗಳನ್ನು ಪಾಲಿಸುವುದರೊಂದಿಗೆ ಮೌಢ್ಯದ ವಿರುದ್ಧ ಹೋರಾಟ ಮಾಡಿದವರಲ್ಲಿ ಹಡಪದ ಅಪ್ಪಣ್ಣ ಅಗ್ರಗಣ್ಯರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಅವರ 890ನೇ ಜಯಂತಿಯಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನ ಅತ್ಯಾಪ್ತರಾಗಿದ್ದ ಹಡಪದ ಅಪ್ಪಣ್ಣ ಸಾಮಾಜಿಕ ಸಮಾನತೆಗೆ ವಚನ ರಚಿಸಿದರು. ಅನುಭವ ಮಂಟಪದಲ್ಲಿ ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಹಡಪದ ಅಪ್ಪಣ್ಣ ಅವರನ್ನು ಭೇಟಿ ಮಾಡಿದ ನಂತರವೇ ಬಸವಣ್ಣನವರನ್ನು ನೋಡಬೇಕಾಗಿತ್ತು ಎಂದರು.
ಹಿಂದಿ ವರ್ಣಾಶ್ರಮ ವ್ಯವಸ್ಥೆಯಲ್ಲಿ ಸಮಾನತೆ ಇರಲಿಲ್ಲ. ಕೆಲವರು ಮಾತ್ರ ಶಿಕ್ಷಣ ಪಡೆಯಲು ಅವಕಾಶವಿತ್ತು. ಮಹಿಳೆಯರಿಗಂತೂ ಶಿಕ್ಷಣ ಎಂಬುದು ಕನಸಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಪರವಾಗಿ ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ಮಂಡಿಸಿದರು. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಅವಕಾಶ ದೊರೆಯಿತು ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಕಡೆ ಗಮನ ಹರಿಸಬೇಕು. ಪಿಯುಸಿ ಬಳಿಕ ಸಿಇಟಿ, ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ರ‌್ಯಾಂಕ್ ಪಡೆದರೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸದೃಢ ಜೀವನ ಕಟ್ಟಿಕೊಳ್ಳಲು ಚೆನ್ನಾಗಿ ಓದಬೇಕು ಎಂದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಹಸೀಲ್ದಾರ್ ಎಂ. ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ತಾಪಂ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಚಶೆಟ್ಟಿ, ಸವಿತಾ ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ದೊಡ್ಡತಾಯಮ್ಮ, ಮುಖ್ಯ ಭಾಷಣಕಾರ ಗುಂಬಳ್ಳಿ ಬಸವರಾಜು ಮತ್ತಿತರರಿದ್ದರು.