

ಮಡಿಕೇರಿ: ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಮಿತಿ ವತಿಯಿಂದ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವವನ್ನು ೨೦೨೩ರ ಫೆ೨೦ ರಿಂದ ಮಾ೬ ರವರೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರಲ್ಲಿ ಕುಲ್ಲೇಟಿರ ಕುಟುಂಸ್ಥರಿಂದ ಹಾಕಿ ಉತ್ಸವ ನಡೆಸಲಾಗಿತ್ತು. ನಂತರ ಪ್ರಾಕೃತಿಕ ವಿಕೋಪ, ಪ್ರವಾಹ, ಕರೋನಾ ಪರಿಣಾಮ ಹಾಕಿ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ೨೦೨೩ರಲ್ಲಿ ಹಾಕಿ ಉತ್ಸವ ನಡೆಸಲು ಕೊಡವ ಹಾಕಿ ಅಕಾಡೆಮಿಯು ಅಪ್ಪಚೆಟ್ಟೋಳಂಡ ಕುಟುಂಬಸ್ಥರಿಗೆ ಧ್ವಜ ಹಸ್ತಾಂತರ ಮಾಡುವುದರೊಂದಿಗೆ ಜವಾಬ್ದಾರಿ ನೀಡಿದೆ ಎಂದು ತಿಳಿಸಿದರು.
ಕುಲ್ಲೇಟಿರ ಹಾಕಿ ಉತ್ಸವದಲ್ಲಿ ೩೩೦ ತಂಡ ಭಾಗವಹಿಸಿ ದಾಖಲೆ ನಿರ್ಮಿಸಿತ್ತು. ಅದೇ ರೀತಿ ಜಿಲ್ಲೆಯಲ್ಲಿ ೮೦೦ಕ್ಕೂ ಅಧಿಕ ಕೊಡವ ಕುಟುಂಬಗಳನ್ನು ಸಂಪರ್ಕಿಸಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದಲ್ಲಿ ೩೫೦ಕ್ಕೂ ಅಧಿಕ ತಂಡಗಳು ಭಾಗವಹಿಸುವಂತೆ ತಯಾರಿ ಮಾಡಲಾಗುವುದು ಎಂದು ತಿಳಿಸಿದರು.
೧.೫೦ ಕೋಟಿ ವೆಚ್ಚ: ೧೬ ದಿನಗಳ ಕಾಲ ನಡೆಯುವ ಕ್ರೀಡಾ ಉತ್ಸವವನ್ನು ಸುಮಾರು ೧.೫೦ ಕೋಟಿ ವೆಚ್ಚದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದಿರುವ ಮನು ಮುತ್ತಪ್ಪ, ಸರ್ಕಾರದಿಂದ ೫೦ ಲಕ್ಷ ಅನುದಾನ ನಿರೀಕ್ಷೆಯಲ್ಲಿದ್ದೇವೆ. ಸಮಿತಿ ವತಿಯಿಂದ ಸರ್ಕಾರಕ್ಕೆ ೧ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಶಾನ್ ಕಾಳಯ್ಯ, ಕುಟುಂಬಸ್ಥರಾದ ರವಿ ಮೊಣ್ಣಪ್ಪ, ಪೂದೇವಯ್ಯ, ನವೀನ್ ಅಪ್ಪಯ್ಯ ಇದ್ದರು.