

ಮಡಿಕೇರಿ:
ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಬೆಳವಣಿಗೆಯಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಶ್ರಮ ಮಹತ್ತರವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಚೇರಂಬಾಣೆಯ ಬೇಂಗ್ ನಾಡು ಕೊಡವ ಸಮಾಜ ಸಹಕಾರದಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಂಡ ಕವಿ ಅವರ 157 ನೇ ಜನ್ಮದಿನದ ಪ್ರಯುಕ್ತ ಚೇರಂಬಾಣೆಯಲ್ಲಿ ಶನಿವಾರ ನಡೆದ 'ಕೊಡವ ಸಾಹಿತ್ಯ ನಾಳ್' ಕಾರ್ಯಕ್ರಮದಲ್ಲಿ ಅಪ್ಪಚ್ಚ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನೆರವೇರಿಸಿ ಮಾತನಾಡಿದರು.
ಕೊಡವ ಸಾಹಿತ್ಯ ಬೆಳವಣಿಗೆಯಲ್ಲಿ ಇಂದಿನ ಮಕ್ಕಳು ಮನಸ್ಸು ಮಾಡಬೇಕಿದೆ. ಅಪ್ಪಚ್ಚ ಕವಿ ಅವರ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ. ಕೊಡವ ಭಾಷಿಕರೆಲ್ಲರೂ ಒಟ್ಟುಗೂಡಿದಾಗ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳು, ಸಾಹಿತ್ಯ ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿದರೆ ಮಾತ್ರ ಕೊಡವ ಭಾಷಿಕ ಜನಾಂಗ ಉಳಿಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದೂ ಇದೇ ಸಂದರ್ಭದಲ್ಲಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ. ಕೊಡಗಿನ ಪರಿಸರಕ್ಕೆ ಪೂರಕವಾಗಿರುವಂತೆ ಕೊಡವ ಸಂಸ್ಕೃತಿ ಮತ್ತು ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಜಿಲ್ಲೆಯ ಎಲ್ಲೆಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ಮತ್ತು ಅಕಾಡೆಮಿ ಮಾಜಿ ಸದಸ್ಯೆ ಚೀರಮ್ಮನ ವಾಣಿ ಚಂಗುಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬೆಂಗೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಟ್ಟಮಾಡ ಮಿಲನ್ ಮುತ್ತಣ್ಣ, ಚೇರಂಬಾಣೆ ಬೆಂಗ್ ನಾಡು ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೆಯAಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು. ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಇತರರು ಇದ್ದರು.