ಗಣಪತಿಗೆ 90 ಮುಡಿ ಅಕ್ಕಿಯ ಅಪ್ಪ: ಪಡುಬಿದ್ರಿ ದೇವಸ್ಥಾನದಲ್ಲಿ ಸಾರ್ವಜನಿಕರಿಂದ ಕಟ್ಟದಪ್ಪ ಸೇವೆ

appa
Published on

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ಎರಡು ದಿನ ನಡೆಯುವ ಸಾಮೂಹಿಕ ಕಟ್ಟದಪ್ಪ ಸೇವೆ ಶನಿವಾರ ಆರಂಭಗೊಂಡಿದೆ. ನೂರಾರು ವರ್ಷಗಳ ಹಿಂದೆ ಕಟ್ಟ (ಒಡ್ಡು) ಕಡಿದು ಹೋಗದಂತೆ ಗ್ರಾಮಸ್ಥರು ಗಣಪತಿಗೆ ಹೊತ್ತ ಹರಕೆ ಅಪ್ಪ ಸೇವೆ ಕಾಲಾನಂತರ ಕಟ್ಟದಪ್ಪ ಸೇವೆಯಾಗಿ ರೂಪುಗೊಂಡಿದೆ.

ಸೇವೆ ಹೆಚ್ಚಿರುವ ಕಾರಣ ಈ ಬಾರಿ ಎರಡು ದಿನ ಸಾರ್ವಜನಿಕ ಹಾಗೂ ಆ.9ರಂದು ಬ್ರಾಹ್ಮಣ ಸಮಾಜದ ಸೇವೆ ನಡೆಯಲಿದೆ. ಪ್ರತಿ ವರ್ಷ ಅಪ್ಪದ ಸೇವೆ ಹೆಚ್ಚುತ್ತಿದ್ದು, ಈ ಸಲ ಒಟ್ಟು ಸುಮಾರು 100 ಮುಡಿ ಅಕ್ಕಿಯಿಂದ ತಯಾರಿಸುವಲ್ಲಿಗೆ ತಲುಪಿದೆ. ಶನಿವಾರ ದೇವರಿಗೆ ಅಪ್ಪ ಸಮರ್ಪಣೆಯಾಗಿದ್ದು, ಭಾನುವಾರ ಅಪ್ಪ ವಿತರಣೆ ಮುಂದುವರಿಯಲಿದೆ.

90 ಬಾಣಸಿಗರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 90 ಬಾಣಸಿಗರು 90 ಮುಡಿ ಅಕ್ಕಿಯಿಂದ ಅಪ್ಪ ತಯಾರಿಸಿದ್ದಾರೆ. ಶನಿವಾರ ಮುಂಜಾನೆ 2ರಿಂದ ಸಂಜೆ 7 ಗಂಟೆಯವರೆಗೆ ಅಪ್ಪ ತಯಾರಿ ನಡೆದು, ಮಹಾಗಣಪತಿ ದೇವರಿಗೆ ರಾತ್ರಿ ಮಹಾಪೂಜೆ ಸಂದರ್ಭದಲ್ಲಿ ಸಮರ್ಪಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು. ಅಪ್ಪ ತಯಾರಿಗೆ 90 ಮುಡಿ ಅಕ್ಕಿ ಹಿಟ್ಟು ಹಾಗೂ ಅಷ್ಟೇ ಪ್ರಮಾಣದ ಬೆಲ್ಲ, 800 ತೆಂಗಿನಕಾಯಿ, 15 ಕೆಜಿ ಏಲಕ್ಕಿ, 30 ಚೀಲ ಹರಳು, 14 ಕ್ವಿಂಟಾಲ್ ಬಾಳೆಹಣ್ಣು ಹಾಗೂ ಅಪ್ಪ ಕಾಯಿಸಲು ಸುಮಾರು 80 ಡಬ್ಬಿ ತೆಂಗಿನ ಎಣ್ಣೆ ಬಳಸಲಾಗಿದೆ.

ಹಿಂದೆ ಕಟ್ಟಿಗೆ ಒಲೆಯಿಂದಲೇ ಅಪ್ಪ ಕಾಯಿಸಲಾಗುತ್ತಿತ್ತು. ಈಗ ಕಟ್ಟಿಗೆ ಒಲೆ ಮತ್ತು ಗ್ಯಾಸ್ ಒಲೆಯನ್ನು ಸಮಾನಾಂತರವಾಗಿ ಬಳಸಲಾಗುತ್ತಿದೆ. ಈ ಬಾರಿ ಒಂದು ಟನ್ ಕಟ್ಟಿಗೆ ಹಾಗೂ 40 ಗ್ಯಾಸ್ ಸಿಲಿಂಡರ್ ಬಳಕೆಯಾಗಿದೆ.

ಗಣಪತಿ ದೇವರಿಗೆ ಅಪ್ಪ ಸಮರ್ಪಿಸಿ ಪೂಜೆ ಸಂದರ್ಭ ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸ್ ಕಿನ್ಯಕ್ಕ ಬಳ್ಳಾಲ ಸಹಿತ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ವರ್ಷದಿಂದ ವರ್ಷಕ್ಕೆ ಅಪ್ಪ ತಯಾರಿ ಹೆಚ್ಚಾದರೂ, ಕಳೆದ 32 ವರ್ಷಗಳಿಂದ ಅಪ್ಪ ತಯಾರಿಕೆಯ ಉಸ್ತುವಾರಿ ವಹಿಸಿಕೊಂಡಿರುವ ನನಗೆ ಕೆಲಸದ ಹುಮ್ಮಸ್ಸು ಇನ್ನಷ್ಟು ಇದೆ. ಈ ವರ್ಷ ಕ್ರಮವಾಗಿ 90 ಮತ್ತು 10 ಮುಡಿ ಅಕ್ಕಿಯಿಂದ ಸಾರ್ವಜನಿಕ ಹಾಗೂ ಬ್ರಾಹ್ಮಣ ಸಮಾಜದ ಸೇವೆಗೆ ಅಪ್ಪ ತಯಾರಿಸಲಾಗುತ್ತಿದೆ.

- ಕೆ.ಎನ್.ಯೋಗೀಶ್ ರಾವ್, ಬಾಣಸಿಗ

ಪ್ರತಿವರ್ಷ ಅಪ್ಪದ ಸೇವೆ ಸಂಖ್ಯೆ ಹೆಚ್ಚುತ್ತಿದೆ. ಕರೊನಾ ಕಾರಣ ಕಳೆೆದೆರಡು ವರ್ಷದಲ್ಲಿ ಸೇವೆ ಕಡಿಮೆಯಿದ್ದು, ಈ ಬಾರಿ ಸೇವೆ ಹೆಚ್ಚಾಗಿದೆ. ಸೇವೆಯೊಂದಕ್ಕೆ 150 ರೂ. ನಿಗದಿಪಡಿಸಲಾಗಿದ್ದು, ಸಾವಿರಾರು ಭಕ್ತರು ಸೇವೆ ಬರೆಸಿದ್ದಾರೆ.

-ಪ್ರಶಾಂತ್‌ಕುಮಾರ್ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net