

ಕಲಬುರಗಿ: ಶ್ರೀ ಶರಣಬಸವೇಶ್ವರ ಮಹಾದಾಸೋಹ ಪೀಠದ 9ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅವರ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಡೆದ ಅಂತಿಮ ದರ್ಶನ ಮತ್ತು ವಿಧಿ &ವಿಧಾನದಲ್ಲಿ ನಡೆಯಿತು. ಯಜುರ್ವೇದದ ಮಂತ್ರಘೋಷ, ಪಂಚಾಕ್ಷರಿ ಮಂತ್ರ ಪಠಣ, ಗುರುಗಳ ಪಾದಪೂಜೆ, ಪಾದೋದಕ ಸ್ವೀಕಾರ, ಮಹಾದೇವನ ಸ್ಮರಣೆ, ಶರಣರ ಜೈಕಾರದೊಂದಿಗೆ ಅಂತಿಮ ಸಂಸ್ಕಾರವೂ ಶುಕ್ರವಾರ ಸಂಜೆ ನೆರವೇರಿತು.
ಗುರುವಾರ ಸಂಜೆ ಲಿಂಗೈಕ್ಯರಾದ ಡಾ.ಅಪ್ಪ ಅವರ ಲಿಂಗ ಶರೀರಕ್ಕೆ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಅರ್ಪಿಸಿ, ಪೀಠಾರೋಹಣ ಅಲಂಕರಿಸಿ, ನಂತರ ಭಕ್ತರ ಅಂತಿಮ ದರ್ಶನಕ್ಕೆ ಶಿವಾನುಭವ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ 7ಗಂಟೆಯಿಂದ ಸಂಜೆ 4ಗಂಟೆವರೆಗೆ ನಾಡಿನ ಹಳ್ಳಿ ಹಳ್ಳಿಗಳಿಂದ ಆಗಮಿಸಿದ 2.5 ಲಕ್ಷಕ್ಕಿಂತ ಹೆಚ್ಚು ಭಕ್ತರು ಲಿಂಗಶರೀರದ ದರ್ಶನ ಪಡೆದರು.
ಸಂಜೆ 4ಕ್ಕೆ ಗುರುಗಳ ಪಾದೋದಕ ಪಡೆದು, ಲಿಂಗಶರೀರಕ್ಕೆ ಅರ್ಪಿಸಿ, ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿ, ಬೆಳ್ಳಿ ಪಲ್ಲಕ್ಕಿಯಲ್ಲಿ ಪೂಜ್ಯ ಲಿಂಗಶರೀರ ಆಸಿನಗೈದು, ಶರಣಬಸವೇಶ್ವರರ ಗದ್ದುಗೆ, ಪರಂಪರೆಯ ಪೀಠಾಧಿಪತಿಗಳ ಗದ್ದುಗೆಗೆ ಐದು ಸುತ್ತು ಪ್ರದಣೆ ಹಾಕಿದ ನಂತರ ವೇದ, ಮಂತ್ರ ಘೋಷಗಳೊಂದಿಗೆ 100ಕ್ಕೂ ಹೆಚ್ಚು ಮಠಾಧೀಶರು, ಪೂಜ್ಯರ ಸಾನ್ನಿಧ್ಯದಲ್ಲಿ ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರ ನೇತೃತ್ವದಲ್ಲಿ ಡಾ.ಅಪ್ಪ ಅವರ ಲಿಂಗಶರೀರವನ್ನು ಕ್ರಿಯಾ ಸಮಾಧಿ ಮಾಡಲಾಯಿತು. ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಂಡ ಭಕ್ತವರ್ಗದವರೆಲ್ಲರಿಗೂ ಕಲ್ಲು ಸಕ್ಕರೆಯ ಪ್ರಸಾದವನ್ನು ವಿತರಿಸಲಾಯಿತು.
ಅಪ್ಪ ಸಂಸ್ಥಾನದ ಬಸವರಾಜ ದೇಶಮುಖ, ಡಾ.ನಿರಂಜನ ನಿಷ್ಠಿ, ಲಿಂಗರಾಜ ಅಪ್ಪ, ಬಸವರಾಜ ಭೀಮಳ್ಳಿ, ಡಾ.ಶಿವಾನಂದ ಭೀಮಳ್ಳಿ, ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ಅನಿಲಕುಮಾರ ಬಿಡವೆ, ಡೀನ್ ಲಕ್ಷಿ$್ಮ ಮಾಕಾ ಪಾಟೀಲ್, ಟಿ.ವಿ.ಶಿವಾನಂದನ್, ಎಸ್ಬಿಆರ್ ಪ್ರಾಚಾರ್ಯ ಎನ್.ಎಸ್.ದೇವರಕಲ್, ಡಾ.ಸುರೇಶ ನಂದಗಾಂವ, ಡಾ.ಬಿ.ಸಿ.ಚವ್ಹಾಣ. ಎಚ್ಕೆಇ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್,ಉಪಾಧ್ಯಕ್ಷ ಸುಭಾಷ ಬಿಜಾಪುರೆ, ಉಮೇಶ ಶೆಟ್ಟಿ ಸೇರಿ ಸಂಸ್ಥಾನದ ನೂರಾರು ಜನರು ಸಕ್ರೀಯವಾಗಿ ಅಂತಿಮ ಕ್ರಿಯಾವಿಧಿ, ವಿಧಾನ, ನಿರ್ವಹಣೆಯಲ್ಲಿ ತೊಡಗಿಸಿಕೊಂಡರು.
ಲಕ್ಷಾಂತರ ಭಕ್ತರ ನಮನ: ಡಾ.ಶರಣಬಸವಪ್ಪ ಅಪ್ಪ ಲಿಂಗೈಕ್ಯ ಹಿನ್ನೆಲೆಯಲ್ಲಿ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ ಸೇರಿ ನಾಡಿನ ವಿವಿಧೆಡೆಯಿಂದ ಲಾಂತರ ಭಕ್ತರು ಆಗಮಿಸಿ, ದರ್ಶನ ಪಡೆದರು. ಮಹಿಳೆಯರು, ಮಕ್ಕಳು, ಪುರುಷರಿಗೆ ಪ್ರತ್ಯೇಕ ಮೂರು ಸರತಿಯಲ್ಲಿ ದರ್ಶನಕ್ಕೆ ಅವಕಾಶ ನೀಡಿದ್ದರಿಂದ ಎಲ್ಲರೂ ಶಾಂತಿ, ಸಮಾಧಾನದಿಂದ ದರ್ಶನ ಪಡೆದರು. ಹಲವು ಗ್ರಾಮಗಳ ಭಕ್ತರು ಡೊಳ್ಳು, ಹಲಗೆ ಮೇಳ, ಭಜನಾ ಮೇಳದೊಂದಿಗೆ ಸರತಿಯಲ್ಲಿಯೇ ತಮ್ಮ ಕಲಾ ಪ್ರದರ್ಶನದ ನಮನ, ಭಜನೆಯ ಗಾಯನದೊಂದಿಗೆ ಭಕ್ತಿ ಅರ್ಪಿಸಿದರು.