

ಹುಳಿಯಾರು : ಮಳೆಯಿಂದ ಕೆರೆ-ಕಟ್ಟೆಗಳು ಮರುಜೀವ ಪಡೆದಿದ್ದು, ಸುಮಾರು 12 ವರ್ಷದ ನಂತರ ಕೆರೆಗಳು ಕೋಡಿ ಬಿದ್ದು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿವೆ.
ಹೌದು.. ಹುಳಿಯಾರು ಸಮೀಪದ ಅಪ್ಪಾಸಾಬಿ ಅಣೆಕಟ್ಟೆ ದಶಕಗಳ ನಂತರ ಮೈದುಂಬಿ ಹರಿಯುತ್ತಿದೆ. ಜಲಧಾರೆಯಂತೆ ಧುಮ್ಮಿಕ್ಕಿ ಹರಿಯುವ ಮೂಲಕ ಸುತ್ತಮುತ್ತಲ ಜನರ ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ಕೆರೆಯ ಕೋಡಿ ನೀರು ಬಂಡೆಗಳ ಮೇಲೆ ಹರಿದು ಹೋಗುವಾಗ ಹಾಲ್ನೊರೆಯಂತೆ ಕಾಣುವ ದೃಶ್ಯ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.
ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ನೀರಿನಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದಾರೆ. ಯುವಕರು ಈಜಿ ಖುಷಿ ಪಟ್ಟರೆ ಇನ್ನು ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಇನ್ನು ಕೆಲವರಂತೂ ತರಹೇವಾರಿ ತಿಂಡಿಗಳನ್ನು ಮಾಡಿಕೊಂಡು ಕುಟುಂಬ ಸಮೇತ ಆಗಮಿಸಿ ನೀರಿನಲ್ಲಿ ಕುಣಿದು ಕುಪ್ಪಳಿಸಿ ಚುಮುಚುಮು ಚಳಿಯಲ್ಲಿ ತಿಂಡಿ ತಿಂದು ಮನರಂಜನೆಯಲ್ಲಿ ತೊಡಗಿದ್ದಾರೆ. ಮನೆಗೆ ಬರುವ ನೆಂಟರಿಷ್ಟರನ್ನು ಅಣೆಯ ಬಳಿ ಕರೆತಂದು ನಮ್ಮೂರ ಪಿಕ್ನಿಕ್ ಸ್ಪಾಟ್ ಹೇಗಿದೆ ನೋಡಿ ಎಂದು ಹೆಮ್ಮೆಯಿಂದ ತೋರಿಸುತ್ತಿದ್ದಾರೆ.
ಒಟ್ಟಾರೆ ಅಕಾಲಿಕ ಮಳೆ ಜಲಪಾತ ಸೃಷ್ಟಿಸಿ ಹುಳಿಯಾರು ಭಾಗದವರಿಗೆ ಪ್ರವಾಸಿ ತಾಣ ನಿರ್ಮಿಸಿದೆ. ಕೆರೆಯ ಸೌಂದರ್ಯದ ಸೊಬಗು ಸವಿಯುವ ಜತೆಗೆ ಪ್ರಕೃತಿ ಮಡಿಲಲ್ಲಿ ಮಿಂದೇಳುವಂತೆ ಮಾಡಿದೆ. ಈಗ ಹೇಮಾವತಿ ನೀರು ಸ್ಥಗಿತಗೊಂಡಿದ್ದು, ಮಳೆ ನೀರಿನಿಂದ ಅಣೆ ಹರಿಯುತ್ತಿದೆ. ಮಳೆ ಸಂಪೂರ್ಣ ನಿಂತಾಗ ಅಣೆಯ ಸೊಬಗೂ ಮರೆಯಾಗುತ್ತದೆ.
ಜಾಲಿ ಗಿಡಗಳು ಅಡ್ಡಿ : ಅಣೆಕಟ್ಟೆ ಒಳಗೆ ಮತ್ತು ಮುಂಭಾಗದಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳು ಕೋಡಿಯಲ್ಲಿ ಈಜಾಡುವ ಯುವಕರಿಗೆ ಕಿರಿಕಿರಿಯಾಗುತ್ತಿದೆ. ಎಚ್ಚರ ತಪ್ಪಿದರೆ ಮೈಯೆಲ್ಲ ಮುಳ್ಳಿನಿಂದ ತರಚಿಸಿಕೊಳ್ಳುವ ಆತಂಕ ಪ್ರವಾಸಿಗರದಾಗಿದೆ. ಅಲ್ಲದೆ, ಹುಳಿಯಾರು ಪಟ್ಟಣದಿಂದ ಅಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟಿದ್ದು, ವಾಹನ ಸವಾರರು ಕೆಸರು ಸಿಡಿಸಿಕೊಂಡು ಓಡಾಡಬೇಕಿದೆ. ನಾಲ್ಕು ಚಕ್ರದ ವಾಹನಗಳು ಬಂದರಂತೂ ನರಕಯಾತನೆ ಅನುಭವಿಸಬೇಕಿದೆ. ಪಟ್ಟಣ ಪಂಚಾಯಿತಿ ಅಣೆಯ ಕೋಡಿ ಬಳಿ ಹಾಗೂ ರಸ್ತೆಯಲ್ಲಿ ಜಾಲಿ ಗಿಡಗಳನ್ನು ತೆರವು ಮಾಡುವ ಜತೆಗೆ ರಸ್ತೆ ದುರಸ್ತಿಗೆ ಮುಂದಾಗಿ ಪ್ರವಾಸಿಗರಿಗೆ ನೆರವಾಗಬೇಕಿದೆ.
ಗುತ್ತಿಗೆದಾರನ ಹೆಸರು ಅಣೆಗೆ : ತಿಮ್ಲಾಪುರ ಕೆರೆ ಕೋಡಿ ಬಿದ್ದಾಗ ನೀರು ಸುವರ್ಣಮುಖಿ ಹಳ್ಳದ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹರಿಯುತ್ತದೆ. ಹೀಗೆ ಹರಿಯುವ ನೀರನ್ನು ತಡೆದು ನಿಲ್ಲಿಸಿ ಇಲ್ಲಿನ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಐದಾರು ದಶಕಗಳ ಹಿಂದೆ ಸರ್ಕಾರದಿಂದ ಅಣೆ ಕಟ್ಟಲಾಯಿತು. ಈ ಅಣೆ ನಿರ್ಮಾಣದ ಗುತ್ತಿಗೆಯನ್ನು ಅಪ್ಪಾಸಾಬಿ ಎನ್ನುವವರು ತೆಗೆದುಕೊಂಡಿದ್ದರು. ಹಾಗಾಗಿ ಅಣೆಗೆ ಅಪ್ಪಾಸಾಬಿ ಕಟ್ಟಿದ ಅಣೆ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಇದು ಅಪ್ಪಾಸಾಬಿ ಅಣೆಯಾಗಿ ಜನಜನಿತವಾಗಿದೆ.