

ಕೊಟ್ಟೂರು: ಅಪಘಾತದಲ್ಲಿ ತಂದೆ, ತಾಯಿ ಹಾಗೂ ಒಡಹುಟ್ಟಿದ ಅಣ್ಣನನ್ನು ಕಳೆದುಕೊಂಡ ಯುವಕನೊಬ್ಬ ಅವರ ಹೆಸರಲ್ಲಿ ಕರೊನಾ ಸೇನಾನಿಗಳು ಹಾಗೂ ಸಂತ್ರಸ್ತರಿಗೆ ನಿತ್ಯ ಊಟ, ಹಣ್ಣು, ಬಿಸ್ಕತ್ ವಿತರಿಸುವ ಮೂಲಕ ಗಮನ ಸೆಳೆದಿದ್ದಾನೆ.
ಪಟ್ಟಣದ ನಿವಾಸಿ, ಮಂಗಳೂರಿನಲ್ಲಿ ಸರ್ಕಾರಿ ನೌಕರಿಯಲ್ಲಿರುವ ಅಫ್ರಜ್ ಕಳೆದ ಆರು ದಿನಗಳಿಂದ ಪೊಲೀಸರು, ತಹಸಿಲ್ ಕಚೇರಿ ಸಿಬ್ಬಂದಿಗೆ ಬೆಳಗ್ಗೆ, ಮಧ್ಯಾಹ್ನ ಬಿಸ್ಕತ್, ಬಾಳೆಹಣ್ಣು, ನೀರಿನ ಬಾಟಲ್ಗಳನ್ನು ವಿತರಿಸುತ್ತಿದ್ದಾರೆ. ಅಲ್ಲದೆ ಬೀದಿಬದಿಯ ಭಿಕ್ಷುಕರಿಗೆ ಮೂರೂ ಹೊತ್ತು ಉಪಾಹಾರ, ಊಟ ವಿತರಿಸುತ್ತಿದ್ದಾರೆ. ಹಾಗೆಯೇ ರುದ್ರಮ್ಮರ ಅನಾಥಾಶ್ರಮ ಆಶ್ರಯ ಪಡೆದವರಿಗೂ ಹಣ್ಣು, ಬಿಸ್ಕತ್, ಊಟ ವಿತರಿಸುತ್ತಾರೆ. ಈತನ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಾನು ಚಿಕ್ಕವನಿದ್ದಾಗ ತಂದೆ-ತಾಯಿ, ಅಣ್ಣನನ್ನು ಅಪಘಾತದಲ್ಲಿ ಕಳೆದುಕೊಂಡು ಅಜ್ಜಿಯ ವಾತ್ಸಲ್ಯದಲ್ಲಿ ಬೆಳೆದೆ. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಸದ್ಯ ಮಂಗಳೂರಿನಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ಸದ್ಯ ಒಂದು ತಿಂಗಳ ಕಾಲ ರಜೆ ಮೇಲೆ ಬಂದಿದ್ದೇನೆ. ಕರೊನಾ ಸಂಕಷ್ಟದಲ್ಲಿರುವವರಿಗೆ ಒಂದು ಸಣ್ಣ ನೆರವು ನೀಡುವ ಮೂಲಕ ಅವರಲ್ಲಿ ಅಪ್ಪ ಅಮ್ಮನ ಪ್ರೀತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಅಫ್ರಜ್.
ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯನಿರತ ಪೊಲೀಸರು ಹಾಗೂ ಠಾಣೆಗೆ ಬಂದು ನಿತ್ಯ ಹಣ್ಣು, ಬಿಸ್ಕತ್, ನೀರಿನ ಬಾಟಲ್ ಸ್ವಯಂಪ್ರೇರಣೆಯಿಂದ ನೀಡುತ್ತಿದ್ದು, ಇತರರಿಗೆ ಮಾದರಿಯಾಗಿದೆ.| ನಾಗಪ್ಪ, ಪಿಎಸ್‌ಐ ಕೊಟ್ಟೂರು ಠಾಣೆ