

ತುಮಕೂರು: ಆರ್ಥಿಕ ಗಣತಿ ಕಾರ್ಯಕ್ಕೆ ಮೊಟ್ಟಮೊದಲ ಬಾರಿಗೆ ಮೊಬೈಲ್ ಆ್ಯಪ್ ತಂತ್ರಾಂಶ ಬಳಸಲಾಗುತ್ತಿದೆ. ಜಿಲ್ಲೆಯ 7ನೇ ಆರ್ಥಿಕ ಗಣತಿಗೆ ಮೊಬೈಲ್ ಅಪ್ಲಿಕೇಶನ್ ಆ್ಯಪ್ ಬಿಡುಗಡೆಗೊಳಿಸುವ ಮೂಲಕ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ಸಹಯೋಗದಲ್ಲಿ 7ನೇ ಆರ್ಥಿಕ ಗಣತಿ ಕ್ಷೇತ್ರ ಕಾರ್ಯಾಚರಣೆಗೆ ಮೊಬೈಲ್ ಆ್ಯಪ್ ತಂತ್ರಾಂಶವನ್ನು ಬಿಡುಗಡೆ ಮಾಡಿ ಮಾತನಾಡಿದ ರಾಕೇಶ್ ಕುಮಾರ್, ದೇಶದಲ್ಲಿ 6 ಆರ್ಥಿಕ ಗಣತಿಗಳನ್ನು ಮಾಡಲಾಗಿದ್ದು, 7ನೇ ಆರ್ಥಿಕ ಗಣತಿಯನ್ನು ಇದೇ ಮೊದಲ ಬಾರಿಗೆ ಡಿಜಿಟಲ್ ಮೊಬೈಲ್ ಆ್ಯಪ್ ಬಳಸಿಕೊಂಡು ಮಾಡುತ್ತಿರುವುದು ವಿಶೇಷ ಎಂದರು.
ಸಾರ್ವಜನಿಕರು ಸಹಕರಿಸಿ: ಗಣತಿ ಕಾರ್ಯವನ್ನು ಸಿಎಸ್‌ಸಿಗಳಿಗೆ ವಹಿಸಲಾಗಿದ್ದು, ಈ ಸೇವಾ ಕೇಂದ್ರದ ಸಿಬ್ಬಂದಿ ಪ್ರತಿ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪ್ರಾಮಾಣಿಕ, ವಾಸ್ತವಿಕ ಮಾಹಿತಿಯನ್ನು ಕಲೆಹಾಕಬೇಕು. ಸಿಬ್ಬಂದಿ ತಮ್ಮ ಮನೆಗೆ ಬಂದಾಗ ಅವರಿಗೆ ಖಚಿತ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕು ಡಾ.ಕೆ.ರಾಕೇಶ್‌ಕುಮಾರ್ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಕಾಮನ್ ಸರ್ವೀಸ್ ಸೆಂಟರ್‌ಗಳ ಜಿಲ್ಲಾ ವ್ಯವಸ್ಥಾಪಕ ಕೆ.ವಿ. ನಾರಾಯಣಸ್ವಾಮಿ, ಜ್ಞಾನಮಣಿ, ಆರ್.ಲೋಕೇಶ್ ಇದ್ದರು.
ಸಿಎಸ್‌ಸಿ ಸಹಯೋಗದಲ್ಲಿ ನಡೆಯುತ್ತಿರುವ 7ನೇ ಆರ್ಥಿಕ ಸಮೀಕ್ಷೆಯು ಆರ್ಥಿಕವಾಗಿ ಜಿಲ್ಲೆ ಎಷ್ಟು ಬೆಳೆದಿದೆ ಎಂಬುದನ್ನು ತಿಳಿಯುವ ಸಮೀಕ್ಷೆ ಅಷ್ಟೆ. ಜಿಲ್ಲೆಯಲ್ಲಿ 1050 ಮಂದಿ ಗಣತಿದಾರರು ಹಾಗೂ 425 ಮಂದಿ ಮೇಲ್ವಿಚಾರಕರನ್ನು ನೇಮಿಸಿದ್ದು, ಅವರು ಒಂದು ಸ್ವರೂಪದಲ್ಲಿ ಮಾಹಿತಿ ಪಡೆದುಕೊಳ್ಳುತ್ತಾರೆ. ಈ ಸಮೀಕ್ಷೆಯನ್ನು ಬೇರೆ ಯಾವುದೇ ವಿಚಾರಗಳಿಗೆ ತಾಳೆ ಹಾಕದೇ ಸಾರ್ವಜನಿಕರು ಸಹಕರಿಸಬೇಕು. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ