

ಕಾರ್ಕಳ: ಬಿಲ್ಲವ ಹೆಣ್ಣು ಮಕ್ಕಳು ಹಾಗೂ ಹಿಂದು ಸಂಘಟನೆಗಳ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ ಪುತ್ತೂರಿನ ಅರಣ್ಯ ಅಧಿಕಾರಿ ಸಂಜೀವ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಬಗ್ಗೆ ಆಗ್ರಹಿಸಿರುವ ಅವರು, ಸರ್ಕಾರಿ ಸೇವಾ ನಿಯಮ ಉಲ್ಲಂಘಿಸಿ ಒಬ್ಬ ಅಧಿಕಾರಿ ಸಮುದಾಯ, ಸಂಘಟನೆ ಹಾಗೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡುವುದು ನಾಗರಿಕ ಸಮುದಾಯ ತಲೆ ತಗ್ಗಿಸುವಂತದ್ದು. ಈ ಬಗ್ಗೆ ಎಫ್ಐಆರ್ ದಾಖಲಿಸಿ ಪ್ರಕರಣ ಮುಗಿದಿದೆ ಎಂದು ಕಣ್ಣೊರೆಸುವ ತಂತ್ರ ಸಾಲುವುದಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಯ ಹದ್ದುಮೀರಿದ ವರ್ತನೆ ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.