

ಚಿತ್ರದುರ್ಗ: ನಾಡಿನ ಜೀವನಾಡಿ ಕೃಷಿ. ಇದರ ಮುಖ್ಯಸ್ಥರೇ ರೈತರು. ನೀವು ಯಾರ ಬಳಿಯೂ ಬೇಡುವ ಅಗತ್ಯವಿಲ್ಲ. ಆದರೆ, ನಿಮ್ಮಲ್ಲಿರುವ ಸಂಘಟನೆ ಸಾಲದು ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಎಪಿಎಂಸಿ ಆವರಣದ ‘ಸಿ’ ಬ್ಲಾಕ್‍ನಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದಿಂದ ದಿ. ಶರಣ ಎಂ. ಗಂಗಾಧರಯ್ಯ ಅವರ ಜ್ಞಾಪಕಾರ್ಥ ನಿರ್ಮಿಸಿರುವ 1ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣದ ಉದ್ಘಾಟನಾ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
ರೈತರು ಕೈ ಎತ್ತಿ ಕೊಡುವವರೇ ಹೊರತು ಬೇಡುವವರಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಿಮ್ಮಲ್ಲೂ ರಾಜಕೀಯ ಬೆರೆಯುತ್ತಿರುವ ಕಾರಣ ಬೇಡುವ ದುಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಮತ್ತು ಅನ್ನದಾತರ ಮಧ್ಯೆ ಪರಸ್ಪರ ಸಹಕಾರ ಇದ್ದರೆ, ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳು ರೈತರಿಗೆ ಅನುಕೂಲ ಮಾಡಿಕೊಡುತ್ತಿವೆ. ಆ ನಿಟ್ಟಿನಲ್ಲಿ ಕೃಷಿ ಸಂಬಂಧಿತ ಎಲ್ಲಾ ಉಪಕರಣ, ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುವಂತ ವಾತಾವರಣ ನಿರ್ಮಿಸಿದರೆ, ವರ್ತಕರ ಬಳಿ ರೈತರು ದುಪ್ಪಟ್ಟು ಬೆಲೆಗೆ ಖರೀದಿಸುವುದು ತಪ್ಪಲಿದೆ ಎಂದು ಸಲಹೆ ನೀಡಿದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಅಸ್ತಕ್ಷೇಪ ಮಾಡಿದರೂ ಸಹಕಾರಿ ಧುರೀಣರಿಂದಾಗಿ ಹಲವೆಡೆ ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದರು.
ಅನೇಕ ಸಕ್ಕರೆ ಸಹಕಾರಿ ಸಂಸ್ಥೆಗಳು ರೈತರಿಗೆ ವಂಚಿಸಿ ಹಣ ಲೂಟಿ ಮಾಡಿವೆ. ಜತೆಗೆ ರಾಜಕೀಯಕ್ಕೂ ಬಂದು ಮೋಸ ಮಾಡಿದ್ದಾರೆ. ಆದರೆ, ಈ ಜಿಲ್ಲೆಯಲ್ಲಿ ಅಂತಹ ಸ್ಥಿತಿ ಇಲ್ಲ ಎಂದ ಅವರು, ಕೃಷಿ ಪದ್ಧತಿ ಕುರಿತು ಇಲಾಖೆ ಮೂಲಕ ರೈತರಿಗಾಗಿ ಸೆಮಿನಾರ್‍ಗಳು ನಡೆಯದೇ ಹೋದರೆ, ಭೂಮಿಯ ಫಲವತ್ತತೆಗೆ ತಕ್ಕಂತೆ ಬೆಳೆಯಲು ಸಾಧ್ಯವಿಲ್ಲ. ಪುನಃ ಹಳೆಯ ಕಾಲಕ್ಕೆ ಮರುಕಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಕಳಪೆ ಗೊಬ್ಬರ ಮಾರಾಟ ಮಾಡಿ ವರ್ತಕರು ಹಣ ದೋಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಹಕಾರ ಸಂಘಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ, ಬೆಳೆಗಳಿಗೆ ಹಾನಿಯಾಗಿದೆ. ಸರ್ಕಾರ ನೀಡುವ ಪರಿಹಾರ ರೈತರ ಕಣ್ಣೀರೊರೆಸಲು ತಾತ್ಕಾಲಿಕ ಕೆಲಸವಷ್ಟೇ ಹೊರತು ಅನ್ನದಾತರ ಬದುಕು ಹಸನಾಗದು. ಅದಕ್ಕಾಗಿ ವಿದ್ಯುತ್ ಮತ್ತು ನೀರಾವರಿ ಸೌಲಭ್ಯ ಹೆಚ್ಚು ಆದ್ಯತೆ ನೀಡಿ ಒದಗಿಸಬೇಕು ಎಂದರು.
,ಸುರೇಶ್ ಹೊಸಕೋಟೆ,ಹನುಮಂತರಾಯ, ವ್ಯವಸ್ಥಾಪಕ ನಿರ್ದೇಶಕ ಎಸ್.ಅರಳಿ ಸೂರ್ಯಕಾಂತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‍ಕುಮಾರ್, ಎಪಿಎಂಸಿ ಹೆಚ್ಚುವರಿ ನಿರ್ದೇಶಕ ನಜೀಬ್ ಉಲ್ಲಾಖಾನ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ಇತರರಿದ್ದರು.
ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥಪ್ಪ,ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕರಾದ ಎಸ್.ಆರ್.ಗಿರೀಶ್(ಮಾಧುರಿ)