

ಕೋಲಾರ: ಕೃಷಿ ಉತ್ಪನ್ನ ಮಾರಾಟ ಮಾರುಕಟ್ಟೆಯೂ (ಎಪಿಎಂಸಿ) ಮೂಲ ಸೌಲಭ್ಯಗಳಿಲ್ಲದೇ ಸೋರಗುತ್ತಿದ್ದು, ರೈತರು, ವ್ಯಾಪಾರಸ್ಥರು, ದಲ್ಲಾಳಿಗರು, ಹಮಾಲರು ವಂಚನೆಗಳ ನಡುವೆಯೂ ವಹಿವಾಟು ನಡೆಸುವಂತಾಗಿದೆ.
ನಗರ ಟಿ.ಚನ್ನಯ್ಯ ಸಂತೆ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರುಕಟ್ಟೆಯನ್ನು 1997ರಲ್ಲಿ ಕೋಂಡರಾಜನಹಳ್ಳಿ ಸಮೀಪ 18 ಎಕರೆ 31 ಗುಂಟೆ ಜಾಗ ಗುರುತಿಸಿ ಸ್ಥಳಾಂತರ ಮಾಡಲಾಯಿತು. ಅದು ಈಗ ಎಪಿಎಂಸಿಯು ಏಷ್ಯ ಖಂಡದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು, ಸೌಲಭ್ಯಗಳ ಜತೆಗೆ ಜಾಗ ಸಮಸ್ಯೆಯಿಂದ ಸೊರಗುತ್ತಿದೆ.
ಎಪಿಎಂಸಿ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದು ಮೂರು ವರ್ಷ ಕಳೆದಿದ್ದು, ಸರ್ಕಾರಿ ಸಮಿಯ ನಿರ್ವಹಣೆಗಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಆದರೆ ನಿರೀತಮಟ್ಟದಲ್ಲಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಎಪಿಎಂಸಿ ಪ್ರಾಂಗಣದಲ್ಲಿ 51 ಗೋದಾಮುಗಳಿದ್ದು, 928.80 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯ ಹೊಂದಿವೆ. 51ರ ಪೈಕಿ 47 ಹಂಚಿಕೆಯಾಗಿದ್ದು, 4 ಬಾಕಿ ಇವೆ. ಅದರಲ್ಲೂ 20 ತಾತ್ಕಾಲಿಕ ಶೆಡ್ಗಳಿದ್ದು, ಲೀಸ್ ಕಂ ಸೇಲ್ ಆಗಿ ಪರಿವರ್ತಿಸಿ ಹಂಚಿಕೆ ಮಾಡಲಾಗಿದೆ.
ಮಾರುಕಟ್ಟೆಗೆ ಪ್ರಮುಖವಾಗಿ ಟೊಮ್ಯಾಟೊ, ಬೀನ್ಸ್, ಕ್ಯಾಪ್ಸಿಕಂ, ಹಸಿ ಮೆಣಸು, ಮೂಲಂಗಿ, ಬದನೆಕಾಯಿ, ಎಲೆಕೋಸು, ಹೂವು ಕೋಸು, ಬಜ್ಜಿ ಮೆಣಸಿನಕಾಯಿ, ಬೀಟ್ರೂಟ್, ಕ್ಯಾರೆಟ್, ಈರುಳ್ಳಿ ಸೇರಿ ಹಣ್ಣು, ಇತರೆ ತರಕಾರಿಗಳ ವಹಿವಾಟು ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷವು ಮೇ ನಿಂದ ನವೆಂಬರ್ ತನಕ ಟೊಮ್ಯಾಟೊ ಸುಗ್ಗಿ ನಡೆಯುತ್ತದೆ. ವಾರ್ಷಿಕ 80 ಲಕ್ಷಕ್ಕೂ ಹೆಚ್ಚು ಟನ್ ಟೊಮ್ಯಾಟೊ ಆವಕವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿ ಬೆಳೆದಿರುವ ಈ ಮಾರುಕಟ್ಟೆಗೆ ಆಂಧ್ರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ಬೇರೆಬೇರೆ ಜಿಲ್ಲೆಗಳಿಂದಲೂ ರೈತರು ಟೊಮ್ಯಾಟೊ ಮಾರುಕಟ್ಟೆಗೆ ತರುತ್ತಾರೆ.
ತರಕಾರಿ ಖರೀದಿಗಾಗಿ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಕೊಲ್ಕತ ಹಾಗೂ ಸ್ಥಳಿಯ ವ್ಯಾಪಾರಸ್ಥರು ಖರೀದಿ ಮಾಡಿ ವಿದೇಶಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಮಾರಾಟ ಮತ್ತು ಖರೀದಿಗಾಗಿ ಬರುವವರಿಗೆ ವಿಶ್ರಾಂತಿ ಕೊಠಡಿ, ಸುಸಜ್ಜಿತ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸೌಲಭ್ಯಗಳನ್ನು ಯಾರನ್ನು ಕೇಳಬೇಕು ಎಂಬ ಗೊಂದಲವಿದ್ದು, ಸ್ವಯಂ ಪ್ರೇರಿತರಾಗಿ ಸೌಲಭ್ಯ ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಹೋಗದೆ ಇರುವುದು ರೈತರ, ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
ಎಪಿಎಂಸಿಯಲ್ಲಿ ಇನ್ನು ಬಿಳಿ ಚೀಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. 1000ಕ್ಕೆ 10ರೂ ಕಮಿಷನ್ ಪಡೆದುಕೊಳ್ಳುತ್ತಿರುವುದು, ತೂಕದಲ್ಲಿ ಮೋಸ, 100 ಕೆಜಿ ತರಕಾರಿಗೆ 5 ಕೆಜಿ ಜಾಕ್ಪಾಟ್ ತೆಗೆಯುವುದು ನಿರಂತರವಾಗಿದೆ. ಈ ಬಗ್ಗೆ ಎಪಿಎಂಸಿ ನಿರ್ದೇಶಕ, ಸಹಾಯಕ ನಿರ್ದೇಶಕರ ಗಮನಕ್ಕೆ ಇದ್ದರೂ ಸಹ ಯಾವುದೇ ರೀತಿ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಾಳಿ ವೇಳೆ ಕಂಡು ಬಂದ ಸಮಸ್ಯೆಗಳೇನು..?
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಇತ್ತೀಚೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿದಾಗ ಸಮಸ್ಯೆಗಳ ಸರಮಾಲೆ ದರ್ಶನವಾಯಿತು. ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಇರುವುದು, ಹೋಟೆಲ್ ವ್ಯಾಪಾರಿಗಳು ತಂಬಾಕು, ಹನ್ಸ್, ಪಾನ್ಪರಾಗ್ ಮತ್ತಿತರ ಮಾದಕ ದ್ರವ್ಯ ಮಾರಾಟ ಮಾಡುವುದು, ಶೇ.8ರಂತೆ ಕಮೀಷನ್ ಪಡೆಯುತ್ತಿರುವುದು. 100 ಕೆಜಿ ತರಕಾರಿಗೆ 5 ಕೆಜಿಯಂತೆ ತರಕಾರಿ ಹೆಚ್ಚುವರಿ ಪಡೆದಯುತ್ತಿರುವುದು. ಸ್ವಚ್ಛತೆ ಕಾಪಾಡದಿರುವುದು, ತರಕಾರಿ ತೂಕ ಹಾಕುವ ಯಂತ್ರಗಳನ್ನು ನವೀಕರಣ ಮಾಡದೇ ಇರುವುದು ಬೆಳಕಿಗೆ ಬಂದಿದ್ದವು, ಈ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವ್ಯವಸ್ಥೆ ಸರಿಪಡಿಸಿಕೊಳ್ಳಲು ಸೂಚಿಸಿದ್ದರು.
"ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಿದ್ದು, ಸ್ವಚ್ಛತೆ ಮಾಡಲಾಗುತ್ತಿದೆ. ಸ್ವಚ್ಛತೆ ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಸವಲತ್ತು ನೀಡಲಾಗುತ್ತಿದೆ."
- ಕಿರಣ್, ನಿರ್ದೇಶಕ, ಕೋಲಾರ ಎಪಿಎಂಸಿ
ಎಪಿಎಂಸಿಯಲ್ಲಿ ಸಮಸ್ಯೆಗಳು ಶಾಶ್ವತವಾಗಿದ್ದು, ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ. ಹೆಜ್ಜೆ ಇಡಲು ಆಗುವುದಿಲ್ಲ. ಇದರಿಂದಾಗಿ ವ್ಯಾಪಾರಸ್ಥರು ರೈತರ ಬೆಳೆಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ.
- ನಾಗರಾಜ್, ರೈತ, ಗೂಳಿಗಾನಹಳ್ಳಿ