

ಕೋಲಾರ: ಕರೊನಾ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿಧಿಸುತ್ತಿದ್ದ ಸೆಸ್ ಇನ್ನಷ್ಟು ಸಮಯಗಳ ಕಾಲ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.
ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಮೂರು ತಿಂಗಳು ಸರ್ಕಾರ ಸೆಸ್ ಮನ್ನಾ ಮಾಡಿತ್ತು. ಇನ್ನಷ್ಟು ಕಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಇದೆ. ಮನ್ನಾ ಮುಂದುವರಿಸಬೇಕೆಂಬುದು ನನ್ನ ಅನಿಸಿಕೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವ ಜತೆಗೆ ಸಿಎಂ ಹಾಗೂ ಸಹಕಾರ ಸಚಿವರ ಜತೆಗೆ ಚರ್ಚಿಸುತ್ತೇನೆ ಎಂದರು.
ಜಮೀನು ಕೊಡಿಸಲು ಬದ್ಧ: ಮಾರುಕಟ್ಟೆ ವಿಸ್ತರಣೆಗೆ ಗುರುತಿಸಿದ್ದ ಜಮೀನು ಕೆರೆ ಅಂಗಳವೆಂದು ಕಡತ ವಾಪಸ್ ಬಂದಿರುವ ಬಗ್ಗೆ ಮಾಹಿತಿಯಿದೆ. ಈ ಜಾಗವನ್ನೇ ಕೊಡಿಸುವ ಪ್ರಯತ್ನ ಮಾಡೋಣ, ಅಥವಾ ಬೇರೆಡೆ ಜಾಗ ಗುರುತಿಸಿದಲ್ಲಿ ಅದನ್ನು ಪರಿಶೀಲಿಸಿ ನೀಡಲು ನಾವು ಸಿದ್ಧವಿದ್ದೇವೆ ಎಂದರು.
ಡಿಸಿ ಸಿ.ಸತ್ಯಭಾಮ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಪ್ರತಿ ಗ್ರಾಪಂಗೆ 2ರಿಂದ 3 ಎಕರೆ ಜಾಗ ನೀಡಿದಂತೆ ಎಪಿಎಂಸಿಗೆ ಜಾಗ ನೀಡಲು ಜಿಪುಣತನವೇನು ಇಲ್ಲ. ಜೈವಿಕ ಇಂಧನ ಘಟಕ ಸ್ಥಾಪನೆಗೂ ಅನುಕೂಲವಾಗುವಂತೆ ಜಾಗ ಗುರುತಿಸಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ದಿನಕ್ಕೆ 10ಕ್ಕೂ ಹೆಚ್ಚು ಕರೊನಾ ಪ್ರಕರಣ ಪತ್ತೆಯಾಗುತ್ತಿವೆ. ಎಪಿಎಂಸಿಯಲ್ಲಿ ಅನೇಕರು ಮಾಸ್ಕ್ ಹಾಕದಿರುವುದು ಕಂಡುಬಂದಿದ್ದು, ಆಡಳಿತ ಮಂಡಳಿಯಿಂದ ಮಾಸ್ಕ್ ವಿತರಿಸಬೇಕು. ಆಗಲೂ ಧರಿಸದಿದ್ದರೆ ದಂಡ ಹಾಕಿ ಎಂದು ಸೂಚಿಸಿದರು.
ಸೆಸ್ ಸಂಗ್ರಹಕ್ಕೆ ಪರ-ವಿರೋಧ: ಎಪಿಎಂಸಿಗೆ ಸೆಸ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಲ್ಲೇ ಪರ ವಿರೋಧ ವ್ಯಕ್ತವಾಯಿತು. ಮಾಜಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮಂಡಿ ಮಾಲೀಕರ ಪರ ಮಾತನಾಡಿದರೆ ಅಧ್ಯಕ್ಷ ಕೆ.ಮಂಜುನಾಥ್, ನಿರ್ದೇಶಕರಾದ ಟಮಕ ವೆಂಕಟೇಶ್, ರೇಖಾ ದಯಾನಂದ್ ರೈತರು ಹಾಗೂ ಎಪಿಎಂಸಿ ಪರ ನಿಂತರು.
ವಡಗೂರು ನಾಗರಾಜ್ ಮಾತನಾಡಿ, ಎಪಿಎಂಸಿಯಲ್ಲಿ ಸಾಕಷ್ಟು ಹಣವಿದೆ. ಕರೊನಾ ಹಿನ್ನೆಲೆಯಲ್ಲಿ ಮಂಡಿ ಮಾಲೀಕರಿಂದ ಸೆಸ್ ಕಟ್ಟಿಸಿಕೊಳ್ಳಬೇಕಿಲ್ಲ. ಸರ್ಕಾರ 3 ತಿಂಗಳು ಮುಂದೂಡಿದರೆ ಅನುಕೂಲ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪಿಸಿದ ಮಂಜುನಾಥ್, ವೆಂಕಟೇಶ್, ರೇಖಾ ಹಾಗೂ ಇತರರು, ಇರುವ ಹಣವನ್ನೆಲ್ಲ ಖರ್ಚು ಮಾಡಿದರೆ ಮುಂದೆ ಗತಿಯೇನು. ರೈತರಿಂದ ಪಡೆಯುವ ಕಮಿಷನ್ ಹಣದಲ್ಲೇ ಸೆಸ್ ಕಟ್ಟುತ್ತಾರೆಯೇ ಹೊರತು ಸ್ವಂತ ಹಣ ಕಟ್ಟುವುದಿಲ್ಲ. ಮಂಡಿ ಮಾಲೀಕರ ಬದಲಿಗೆ ಸರ್ಕಾರ ಸೆಸ್ ಭರಿಸುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ನಮ್ಮ ನಷ್ಟ ಭರಿಸಿಕೊಡುವಂತಿದ್ದರೆ ಸರ್ಕಾರ ನೀಡಲಿ, ಇಲ್ಲವೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರ ವಿರೋಧ ಚರ್ಚೆ ಮುಂದುವರಿಯುತ್ತಿದ್ದಂಥೆ ಸಚಿವ ಎಚ್.ನಾಗೇಶ್ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿ ವಿಚಾರಕ್ಕೆ ತೆರೆ ಎಳೆದರು.
ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶ್, ತಹಸೀಲ್ದಾರ್ ಶೋಭಿತಾ, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ಡಿವೈಎಸ್ಪಿ ಚೌಡಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ , ಜೈ ಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಣಸ್ವಾಮಿ ಇತರರಿದ್ದರು.
ಕರೊನಾ ನಿಯಂತ್ರಣಕ್ಕೆ ಸರ್ಕಾರ ಪ್ರತಿ ಭಾನುವಾರ ಲಾಕ್‌ಡೌನ್‌ಗೆ ನಿರ್ಧಸಿದೆ. ಎಪಿಎಂಸಿ ಬಂದ್ ಮಾಡಿದರೆ ರೈತರಿಗೆ ತೊಂದರೆ, 15 ರಿಂದ 20 ಕೋಟಿ ರೂ. ನಷ್ಟ ಆಗುತ್ತದೆ. ತರಕಾರಿ ಬೆಲೆ ಕುಸಿಯುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಎಪಿಎಂಸಿಗೆ ಬಂದ್‌ನಿಂದ ಜಿಲ್ಲಾಧಿಕಾರಿಗಳು ವಿನಾಯಿತಿ ನೀಡಿದ್ದಾರೆ. ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ