ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರೈತ ಸಂಘ ಪಟ್ಟು

13-05-rama-protest
Published on

ರಾಮನಗರ: ಕೃಷಿ ಮಾರುಕಟ್ಟೆ ಕಾಯ್ದೆಗೆ ತಂದಿರುವ ಹೊಸ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆೆ ಮನವಿ ಸಲ್ಲಿಸಿದರು.

ಬ್ರಿಟಿಷರ ಕಾಲದಲ್ಲಿ ಆರಂಭಗೊಂಡು ಇಲ್ಲಿಯವರೆಗೂ ವಿವಿಧ ಹಂತಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಅಂದಿನಿಂದ ಇಂದಿನವರೆಗೂ ರೈತ ಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಎಪಿಎಂಸಿಗಳ ಸ್ವರೂಪವನ್ನೇ ಬದಲಾಯಿಸಿ ಖಾಸಗೀಕರಣ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಹೊರಟಿದೆ. ಕೂಡಲೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ಮೂಲಕ ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನೂ ನೀಡಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರ ಈಗಾಗಲೇ ತಿದ್ದುಪಡಿ ಕಡತವನ್ನು ರಾಜ್ಯಪಾಲರ ಸಹಿಗೆ ಕಳುಹಿಸಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಣಸ್ವಾಮಿ ದೂರಿದರು.

ರೈತರಿಗೆ ಮಾರಕವಾಗಿರುವ ಮತ್ತು ಅಂತಾರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿರುವ ಈ ತಿದ್ದುಪಡಿ ಕಡತವನ್ನು ರಾಜ್ಯ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಕಡತಕ್ಕೆ ಸಹಿ ಬಿದ್ದರೆ ರೈತರದ್ದೇ ಆಗಿರುವ ಎಪಿಎಂಸಿ ಮಾರುಕಟ್ಟೆಗಳು ಕಾರ್ಪೋರೇಟ್ ಕಂಪನಿಗಳ ಕೇಂದ್ರಗಳಾಗಿ ಬದಲಾವಣೆ ಹೊಂದಲಿವೆ. ಇಲ್ಲಿ ಬೆಲೆಯನ್ನು ಕಂಪನಿಗಳೇ ನಿರ್ಧಾರ ಮಾಡುವುದರಿಂದ ರೈತರಿಗೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗುವ ಈ ತಿದ್ದುಪಡಿ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಮತ್ತು ರಾಜ್ಯಪಾಲರು ರೈತರ ಹಿತ ಬಲಿಕೊಟ್ಟು ಕಡತಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿದರು. ಒಂದು ವೇಳೆ ರೈತ ವಿರೋಧಿ ತಿದ್ದುಪಡಿ ಜಾರಿಗೆ ಮುಂದಾದರೆ ರೈತ ಸಂಘ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಲಕ್ಷ್ಮಣಸ್ವಾಮಿ ಎಚ್ಚರಿಕೆಯನ್ನೂ ನೀಡಿದರು.

ನಂತರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಭೈರೇಗೌಡ, ಗೌರವಾಧ್ಯಕ್ಷ ಸಿ.ಚೆಲುವಯ್ಯ, ಸಂಘಟನಾ ಕಾರ್ಯದರ್ಶಿ ರಾಜೇಗೌಡ, ಸಹ ಕಾರ್ಯದರ್ಶಿ ಶ್ರೀನಿವಾಸ್, ಸಂಚಾಲಕಿ ನಾಗಮ್ಮ, ತಾಲೂಕು ಅಧ್ಯಕ್ಷರಾದ ರಮೇಶ್, ಅನಂತರಾಮ್ ಪ್ರಸಾದ್ ಇದ್ದರು.

ಆತಂಕಗಳೇನು?: •ಖರೀದಿದಾರ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು ಮತ್ತು ಅವನಿಗೆ ಮಾರುಕಟ್ಟೆ ಕಾನೂನುಗಳು ಅನ್ವಯವಾಗುವುದಿಲ್ಲ •ಕಾರ್ಪೊರೇಟ್ ಸಂಸ್ಥೆಗಳು ತಮ್ಮದೇ ಆದ ಖಾಸಗಿ ಮಾರುಕಟ್ಟೆ ನಿರ್ಮಿಸಿಕೊಳ್ಳಬಹುದು •ಮಧ್ಯವರ್ತಿಗಳು ಮತ್ತು ಖಾಸಗಿ ಕಂಪನಿಗಳು ನಿಗದಿ ಮಾಡಿದ ದರಕ್ಕೆ ರೈತರು ಬೆಳೆಗಳನ್ನು ಮಾರಾಟ ಮಾಡಬೇಕಾಗುತ್ತದೆ •ರೈತರ ಆದಾಯ ಹೆಚ್ಚಿಸುವ ಆಶಯಕ್ಕೆ ಧಕ್ಕೆಯಾಗುತ್ತದೆ •ರೈತರಿಗೆ ಮಾರುಕಟ್ಟೆ ಭದ್ರತೆ ಇರುವುದಿಲ್ಲ •ಖಾಸಗಿ ಮಾರುಕಟ್ಟೆಗಳು ಪ್ರಾರಂಭಗೊಂಡರೆ ಸರ್ಕಾರಿ ಎಪಿಎಂಸಿಗಳು ಸಂಪೂರ್ಣ ನಶಿಸಿಹೋಗಲಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net