

ಮುಧೋಳ: ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡಲು ಸುಸಜ್ಜಿತ ಮಾರುಕಟ್ಟೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಮುಧೋಳ ಮತ್ತು ಲೋಕಾಪೂರದ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಪಿಎಂಸಿ ಸಚಿವನಾಗಿದ್ದಾಗ ಗ್ರಾಮೀಣ ಸಂತೆ, ಆವರ್ಥ ನಿಧಿ, ರೈತರಿಗೆ ಮಾರುಕಟ್ಟೆ ಮಾಹಿತಿ ಕೇಂದ್ರ ಸೇರಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಬಿಜೆಪಿ ಸರ್ಕಾರ ಕೆಲವು ಯೋಜನೆಗಳನ್ನು ರದ್ದುಪಡಿಸಿದ್ದರಿಂದ ಎಪಿಎಂಸಿ ಮಾರುಕಟ್ಟೆಗಳು ಈಗ ಆದಾಯವಿಲ್ಲದೆ ಸಂಕಷ್ಟದಲ್ಲಿವೆ ಎಂದರು.
ಮುಧೋಳ ಮತ್ತು ಲೋಕಾಪೂರ ಎಪಿಎಂಸಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರದಿಂದ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಮುಧೋಳ ಎಪಿಎಂಸಿಗೆ ನೂತನವಾಗಿ ನಾಮ ನಿರ್ದೇಶಕ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಗಪ್ಪ ಇಮ್ಮನ್ನವರ ಅವರು ಸಚಿವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಮಾತನಾಡಿ, ರೈತರ ಏಳಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮಹಾಂತೇಶ ಮಾಚಕನೂರ, ವೆಂಕಣ್ಣ ಅಂಕಲಗಿ, ಭೀಮಪ್ಪ ಮೆಟಗುಡ್ಡ, ಮಲ್ಲಪ್ಪ ಮಂಟೂರ, ಉದಯಸಿಂಗ್ ಪಡತಾರೆ, ಮುದಕಣ್ಣ ಅಂಬಿಗೇರ, ದಾನೇಶ ತಡಸಲೂರ, ಶಿವಾನಂದ ಉದಪುಡಿ, ಮಹಾಲಿಂಗಪ್ಪ ಹುಂಡೇಕಾರ, ತಾಪಂ ಇಒ ಉಮೇಶ ಸಿದ್ದಾಳ, ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ ಸಿ.ಎ.ಉದ್ದಪ್ಪಗೋಳ ಇದ್ದರು.