ಎಪಿಎಂಸಿ ಹಳೇ ಕಾಯ್ದೆಗಳ ಜಾರಿ ಮಾಡಿ

manavi
ಮಹಾಲಿಂಗಪುರ ದಲಾಲ ವರ್ತಕರ ಸಂಘದಿಂದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ವಿಜಯಪುರ ನಗರದ ಅವರ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು. ಮಹಾಲಿಂಗಪ್ಪ ಕೋಳಿಗುಡ್ಡ, ಅಶೋಕ ಅಂಗಡಿ, ಶ್ರೀಶೈಲ ನುಚ್ಚಿ ಇತರರಿದ್ದರು.
Published on

ಮಹಾಲಿಂಗಪುರ: ಎಪಿಎಂಸಿಗೆ ಮೊದಲಿದ್ದ ಕಾಯ್ದೆಯನ್ನು ಸರ್ಕಾರ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ದಲಾಲ ವರ್ತಕರ ಸಂಘದ ಸದಸ್ಯರು ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ನೇತೃತ್ವದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ವಿಜಯಪುರ ನಗರದಲ್ಲಿನ ಸಚಿವ ಶಿವಾನಂದ ಪಾಟೀಲ ಅವರ ನಿವಾಸದಲ್ಲಿ ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಮಹಾಲಿಂಗಪ್ಪ ಕೋಳಿಗುಡ್ಡ, ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ಕಾನೂನುಗಳನ್ನು ತರುವ ಮುಂಚೆ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 700 ಕೋಟಿ ರೂ. ಗಿಂತಲೂ ಅಧಿಕ ಸೆಸ್ ಜಮಾ ಆಗುತ್ತಿತ್ತು. ರಾಜ್ಯ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿದ್ದವು. ಈಗ ಕೇವಲ 150 ಕೋಟಿ ರೂ. ಗಿಂತಲೂ ಕಡಿಮೆ ಸೆಸ್ ಜಮಾ ಆಗುತ್ತಿರುವುದರಿಂದ ರಾಜ್ಯದಲ್ಲಿಯೇ ಹೆಚ್ಚಿನ ಕರ ತುಂಬುವ ಎರಡನೇ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದ ಮಹಾಲಿಂಗಪುರ ಸೇರಿ ರಾಜ್ಯದ 162 ಮಾರುಕಟ್ಟೆಗಳಲ್ಲಿ ಅಭಿವೃದ್ಧಿ ಕೆಲಸಗಳು ಸಹ ಸ್ಥಗಿತಗೊಂಡಿವೆ. ವಹಿವಾಟು ಇಲ್ಲದೆ ಅಂಗಡಿಗಳು, ಉಗ್ರಾಣಗಳು, ಇತರ ಕಟ್ಟಡಗಳು ಹಾಳಾಗಿ ಮಾರುಕಟ್ಟೆ ವಾತಾವರಣವೆಲ್ಲ ಬಿಕೋ ಎನ್ನುತ್ತಿದೆ. ಇದರಿಂದ ಸ್ಥಳೀಯ ಹಮಾಲರು, ಕಾರಕೂನರು ಮತ್ತು ವ್ಯಾಪಾರಿಗಳು ಆರ್ಥಿಕ ತೊಂದರೆಗೀಡಾಗಿದ್ದಾರೆ ಎಂದರು.

ರೈತ ಸಮುದಾಯಕ್ಕೂ ಕಾನೂನುಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ರೈತ ಮಾರುಕಟ್ಟೆಗೆ ಬೆಲ್ಲ ತಂದಾಗ ಹಲವಾರು ಜನ ಖರೀದಿದಾರರಿಂದ ಪೈಪೋಟಿ ಏರ್ಪಟ್ಟು ಉತ್ತಮ ಬೆಲೆ ಸಿಗುತ್ತದೆ. ನೇರ ಹೊರಗಿನ ವ್ಯಾಪಾರದಿಂದ ರೈತನಿಗೆ ಮಾರುಕಟ್ಟೆಯ ನಿಜ ದರದ ಮಾಹಿತಿ ಕೊರತೆಯಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತ ನಷ್ಟಕ್ಕೊಳಗಾಗುತ್ತಾನೆ ಎಂದರು.

ಕೇಂದ್ರ ಸರ್ಕಾರ ಕಳೆದ ವರ್ಷ ದೇಶದ ರೈತರ ಪ್ರತಿಭಟನೆ ಎದುರಿಸಿ ಮೂರು ಕೃಷಿ ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸಿದೆ. ಆದರೂ ದೇಶದ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿರುವ ಕಾರಣದಿಂದ ಕರ್ನಾಟಕದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಕಾಯ್ದೆ ರದ್ದು ಮಾಡುವ ಮಸೂದೆಗೆ ವಿಧಾನಸಭೆಯಿಂದ ಅನುಮೋದನೆ ಸಿಕ್ಕಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಹಿನ್ನಡೆಯಾಗಿ ಕೃಷಿ ಕಾಯ್ದೆಗಳು ಹಾಗೆಯೇ ಉಳಿದುಕೊಂಡು ಬಂದಿವೆ ಎಂದರು.
ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ಅಂಗಡಿ, ದಲಾಲ ವರ್ತಕರ ಸಂಘದ ಕಾರ್ಯದರ್ಶಿ ಶ್ರೀಶೈಲ ನುಚ್ಚಿ, ಬಸವರಾಜ ಬಟಕುರ್ಕಿ, ಕಲ್ಲಪ್ಪ ತೇಲಿ, ಸಂಗಪ್ಪ ಲೋಣಿ, ವಿನಯ ಚಮಕೇರಿ, ಸುನೀಲ ಕಿರಗಟಗಿ, ವಿಜಯಕುಮಾರ ಬಾಡನವರ, ಬಸವರಾಜ ನಿಂಬರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net