

ಚಿಕ್ಕಮಗಳೂರು: ನಗರದ ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಅಗತ್ಯವಿದೆ ಎಂದು ರೈತರು ಹಾಗೂ ಸಚಿವ ಸಿ.ಟಿ.ರವಿ ಬೇಡಿಕೆ ಇಟ್ಟಿದ್ದು ಮನವಿ ಸಲ್ಲಿಸಿದರೆ ಎರಡು ದಿನದಲ್ಲಿ ಮಂಜೂರು ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಂಗಳವಾರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸ್ಥಳೀಯ ಎಪಿಎಂಸಿಗೆ ಬೇಕಾದ ಸೌಲಭ್ಯ ಮತ್ತು ಅನುದಾನಕ್ಕೆ ಸಚಿವ ಸಿ.ಟಿ.ರವಿ ಬೇಡಿಕೆ ಇಟ್ಟಿದ್ದಾರೆ. ಅಧಿಕೃತವಾಗಿ ಮಾಹಿತಿ ಪಡೆದು ಮೂರು ದಿನದಲ್ಲಿ ಅನುಮೋದನೆ ಕೊಡಲಾಗುವುದು ಎಂದರು.
ರಾಜ್ಯದಲ್ಲಿ 22 ಕೋಲ್ಡ್ ಸ್ಟೋರೇಜ್ ಇದ್ದು ಉಳಿದಂತೆ ಎಪಿಎಂಸಿಗಳಿಗೆ ಏಳು ಕಡೆ ಬೇಡಿಕೆ ಇದೆ. ಮೈಸೂರಿನಲ್ಲಿ ಅದಕ್ಕಾಗಿಯೇ ಎರಡು ಎಕರೆ ಜಾಗ ಮೀಸಲಿಟ್ಟಿದ್ದರಿಂದ ಅಲ್ಲಿಗೆ ತಕ್ಷಣ ಮಂಜೂರು ಮಾಡಲಾಗಿದೆ. ಉಳಿದ ಆರು ಜಾಗಗಳನ್ನು ಪರಿಶೀಲಿಸಿ ನಿರ್ವಣಕ್ಕೆ ಬೇಕಾದಷ್ಟು ಸ್ಥಳಾವಕಾಶ ಹೊಂದಿರುವ ಕಡೆ ರೈತರ ಬೇಡಿಕೆಗನುಗುಣವಾಗಿ ಮಂಜೂರು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಎರಡು ವಿಧದಲ್ಲಿ ಕೋಲ್ಡ್ ಸ್ಟೋರೇಜ್ಗೆ ಮಂಜೂರಾತಿ ನೀಡಲಾಗುವುದು. ಎಪಿಎಂಸಿಯಿಂದ ಮಂಜೂರು ಮಾಡುವುದು ಒಂದು ಕ್ರಮವಾದರೆ, ಸ್ಥಳ ಸರ್ಕಾರ ಕೊಟ್ಟು ಅದಕ್ಕೆ ಬೇಕಾದ ಹಣವನ್ನು ಸ್ಥಳೀಯರು ಹಾಕಿ ನಿರ್ವಿುಸಿ ಅವರೇ ನಿರ್ವಹಣೆ ಮಾಡುವುದು ಮತ್ತೊಂದು ವಿಧಾನ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಎಪಿಎಂಸಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಅಗತ್ಯ ಸೌಲಭ್ಯಗಳ ಬಗ್ಗೆ ರೈತರು ಹಾಗೂ ಅಧಿಕಾರಿಗಳೊಂದಿಗೆ ರ್ಚಚಿಸಿ ಅನುಕೂಲ ಕಲ್ಪಿಸಲಾಗುತ್ತದೆ. ಅಭಿವೃದ್ಧಿಗೆ ಮನವಿ ಸಲ್ಲಿಸಿದರೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.