

ಮೂರ್ತಿ ಟಿ.ಸಿ.ಎಸ್ ತಿಪಟೂರು
ದೃಢತೆ ಕಳೆದುಕೊಂಡು, ಅಪಾಯಕಾರಿ ಹಂತದಲ್ಲಿರುವ ತಿಪಟೂರಿನ ರೈತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಆಡಳಿತ ಕಚೇರಿ ಶ್ರೀವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗದಿದ್ದರೆ ಅಪಾಯ ತಪ್ಪಿದ್ದಲ್ಲ.
ಹೌದು.. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿಯೇ ಮುಳುಗಿರುವ ಸರ್ಕಾರಕ್ಕೆ ಸಾರ್ವಜನಿಕ ಆಸ್ತಿಗಳ ಬಗ್ಗೆ ಕಾಳಜಿ ಇಲ್ಲವಾಗಿದೆ. ಇದರಿಂದ ಅದೆಷ್ಟೋ ಸರ್ಕಾರಿ ಕಚೇರಿ, ಕಟ್ಟಡಗಳು ಸೂಕ್ತ ನಿರ್ವಹಣೆಯಿಲ್ಲದೆ ಆಗಲೋ, ಈಗಲೋ ಕುಸಿಯುವಂತಿವೆ. ಇದಕ್ಕೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರೈತ ಭವನ ಸಾಕ್ಷಿಯಾಗಿದೆ.
ಬಿರುಕುಬಿಟ್ಟ ಆಧಾರ ಸ್ತಂಭ: ಮೂರು ಅಂತಸ್ತಿನ ಕಟ್ಟಡಕ್ಕೆ ಪ್ರಮುಖ ಆಧಾರ ಸ್ತಂಭವಾಗಿರುವ ಮಧ್ಯ ಭಾಗದಲ್ಲಿರುವ ಪಿಲ್ಲರ್ ಸೇರಿ ಕಟ್ಟಡಕ್ಕೆ ಭದ್ರತೆ ಒದಗಿಸಿರುವ ಪಿಲ್ಲರ್ಗಳು ಬಿರುಕು ಬಿಟ್ಟಿದ್ದು, ಒಳಗಿನ ಕಬ್ಬಿಣದ ಸರಳು ತುಕ್ಕು ಹಿಡಿದಿವೆ. ಮುಟ್ಟಿದರೆೆ ಕಬ್ಬಿಣದ ಪುಡಿ ಉದುರುತ್ತಿದೆ. ಇಂತಹ ಅಪಾಯಕಾರಿ ಕಟ್ಟಡ ಈಗಲೋ, ಆಗಲೋ ಕುಸಿಯುವ ಹಂತದಲ್ಲಿದ್ದರೂ ಎಪಿಎಂಸಿ ಆಡಳಿತ ಕಚೇರಿ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ತಕ್ಷಣ ಸೂಕ್ತ ಸ್ಥಳಕ್ಕೆ ಸ್ಥಳಾಂತರವಾಗದಿದ್ದರೆ ಮುಂದೊಂದು ದಿನ ಅಪಾಯ ಖಚಿತ.
ಮೂರು ಅಂತಸ್ತಿನ ಕಟ್ಟಡ: ಒಟ್ಟು 6080 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ನೆಲ ಮಹಡಿ ಹೊರತುಪಡಿಸಿ ಮೊದಲು ಮತ್ತು ಎರಡನೇ ಮಹಡಿಯಲ್ಲಿ ಅಧ್ಯಕ್ಷರು, ಎಪಿಎಂಸಿ ಕಾರ್ಯದರ್ಶಿಗಳ ಕೊಠಡಿ ಸೇರಿದಂತೆ ಒಟ್ಟು 15 ಕೊಠಡಿಗಳಿದ್ದು, ಇದರಲ್ಲಿ ಮೂರು ಕೊಠಡಿಗಳನ್ನು ಸಣ್ಣ ನೀರಾವರಿ ಇಲಾಖೆಯ ಕಚೇರಿಗೆ ಬಿಟ್ಟುಕೊಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಆಡಳಿತ ಕಚೇರಿಗೆ ಸರ್ಕಾರದ ಮಾರ್ಗಸೂಚಿಯಂತೆ 34 ಸಿಬ್ಬಂದಿ ಅಗತ್ಯವಿದೆ. ಆದರೆ, ಸದ್ಯ ಕಾರ್ಯದರ್ಶಿಗಳೂ ಸೇರಿ ಕೇವಲ 5 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಟೆಂಡರ್ ಇರುವ ದಿನದಂದು ಕಚೇರಿಗೆ ನೂರಾರು ಗುತ್ತಿಗೆದಾರರು, ಹಮಾಲರು, ದಲ್ಲಾಳಿಗಳು ಬಂದು ಹೋಗುತ್ತಾರೆ. ಇವರೆಲ್ಲರ ಹಿತದೃಷ್ಟಿಯಿಂದ ಆಡಳಿತ ಕಚೇರಿ ಸ್ಥಳಾಂತರ ಅನಿವಾರ್ಯವಾಗಿದೆ.
ಪ್ರಾರಂಭದಲ್ಲೇ ವಿಘ್ನ
ಪ್ರಾರಂಭದಿಂದಲೇ ವಿಘ್ನಗಳನ್ನು ಕಂಡ ರೈತ ಭವನದ ಕಾಮಗಾರಿ 1984ರಲ್ಲಿ ಪ್ರಾರಂಭವಾಗಿ, 1993ರಲ್ಲಿ ಮುಕ್ತಾಯವಾಗಿತ್ತು. ಪ್ರಸ್ತುತ ಕಟ್ಟಡ ನಿಮಾರ್ಣವಾಗಿ 41 ವರ್ಷಕಳೆದಿವೆ. ಆದರೆ, ಈ ಕಟ್ಟಡ ಕಾಮಗಾರಿಗೆ ಮೂರು ಗುತ್ತಿಗೆದಾರರು ಕೈ ಬದಲಿಸಿದ ಪರಿಣಾಮ ದೀರ್ಘಕಾಲ ಬಾಳಿಕೆ ಬರಬೇಕಿದ್ದ ಕಟ್ಟಡ ಅತ್ಯಲ್ಪ ಅವಧಿಯಲ್ಲೇ ಶಿಥಿಲಾವಸ್ಥೆ ತಲುಪಿದೆ. ಕಳೆದ ಸೆಪ್ಟೆಂಬರ್ನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡದ ಗುಣಮಟ್ಟ ಪರೀಕ್ಷಿಸಿರುವ ತುಮಕೂರು ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಕಟ್ಟಡ ದೃಢತೆ ಕಳೆದುಕೊಂಡಿದೆ (ನಾಟ್ ಸ್ಟೇಬಲ್) ಎಂದು ಸ್ಪಷ್ಟವಾಗಿ ವರದಿಯಲ್ಲಿ ನಮೂದಿಸಿದ್ದು, ಸುರಕ್ಷತೆ ದೃಷ್ಟಿಯಿಂದ ಆದಷ್ಟು ಬೇಗ ಕಟ್ಟಡ ತೆರವುಗೊಳಿಸುವುದು ಅನಿವಾರ್ಯವಾಗಿದೆ.