

ಕೊಕಟನೂರ: ಕೃಷಿ ತಿದ್ದುಪಡಿ ಮಸೂದೆ ಹಾಗೂ ಎಪಿಎಂಸಿ ಕಾಯ್ದೆಯನ್ನು ಈ ಮೊದಲಿನಂತೆ ಸರಳೀಕರಣಗೊಳಿಸಿ ರೈತರ ಜೀವನಾಡಿಯಾಗಬೇಕು ಎಂದು ಅಥಣಿ ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಮಹಾದೇವ ಮಡಿವಾಳ ಹೇಳಿದರು.
ಗ್ರಾಮದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ರೈತಸಂಘ ಹಾಗೂ ಹಸಿರುಸೇನೆ ಮಹಿಳಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಹಾಗೂ ಕೃಷಿಪರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿವೆ. ರೈತರಿಗೆ ಮಾರಕವಾದ ಮಸೂದೆಗಳನ್ನು ಜಾರಿಗೆ ತಂದು ಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ತೊಂದರೆ ನೀಡುತ್ತಿವೆ. ರೈತರೆಲ್ಲರೂ ಒಗ್ಗಟ್ಟಾಗಿ ಆಡಳಿತದ ವಿರುದ್ಧ ದಂಗೆ ಏಳುವ ಮುನ್ನವೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಕಾರ್ಯಕರ್ತರು ಪ್ರಾಮಾಣಿಕತೆ, ದಕ್ಷತೆಯಿಂದ ದುಡಿದಷ್ಟು ಯಾವ ವೃತ್ತಿಯವರು ದುಡಿಯುವುದಿಲ್ಲ. ಯಾವುದೇ ಸಂಬಳ ಪಡೆಯದೆ ಪ್ರಾಣಿ, ಪಕ್ಷಿಗಳ ಹಸಿವು ನೀಗಿಸುವ ಕೆಲಸವನ್ನು ಕೃಷಿಕರು ಮಾಡುತ್ತಿದ್ದಾರೆ. ಮಹಿಳಾ ರೈತ ಸಂಘದ ಸದಸ್ಯೆಯರು ಸಮಾಜ ಹಾಗೂ ಸರ್ಕಾರದ ದಾರಿ ತಪ್ಪಿದಾಗ ಹೋರಾಟದ ಮೂಲಕ ಎಚ್ಚರಿಸಬೇಕು ಎಂದರು. ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ಹನಾಪುರೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ಸರ್ಕಾರ ರೈತರ ಬೆಳೆಗೆ ಯೋಗ್ಯ ಬೆಲೆ ನೀಡಬೇಕು. ಮಹಿಳಾ ಸಂಘದ ಪದಾಧಿಕಾರಿಗಳು ಕಷ್ಟದಲ್ಲಿರುವ ರೈತ ಕುಟುಂಬದ ಪರ ಹೋರಾಟ ಮಾಡಬೇಕು ಎಂದರು. ಪಾರೀಸ್ ಯಳಗೂಡ, ಯಲ್ಲವ್ವ ಹೂಗಾರ, ಪಾರವ್ವ ಆಲಸ, ಯಲ್ಲವ್ವ ಬಭಣಜ, ಮಾಯವ್ವ ಪೂಜಾರಿ, ಪಾರವ್ವ ಯಲಡಗಿ, ಶೋಭಾ ಬಿಳಗಿ, ಬಾಗವ್ವಾ ಸಕನಟ್ಟಿ, ಮಹಾದೇವಿ ಗುಂಡೇವಾಡಿ, ಮುರಗೇಪ್ಪ ಹೊನವಾಡ, ಭರಮೂ ಅಡಹಳ್ಳಿ, ಶಶಿಧರ ಬುರ್ಲಿ ಮತ್ತಿತರರು ಇದ್ದರು.