ಕೃಷಿ ಪಂಪ್‌ಸೆಟ್‌ಗೆ ಮೀಟರ್ ವಿರೋಧಿಸಿ ವಿಧಾನಸೌಧ ಚಲೋ 26ಕ್ಕೆ; ಕಬ್ಬಿನ ಎಫ್‌ಆರ್‌ಪಿ ಮರು ಪರಿಶೀಲನೆಗೆ ಆಗ್ರಹ

Published on

ದಾವಣಗೆರೆ: ಕಬ್ಬಿನ ಎಫ್‌ಆರ್‌ಪಿ ಮರು ಪರಿಶೀಲಿಸಬೇಕು. ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಹುನ್ನಾರ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಸೆ.26ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರ ಸಕ್ಕರೆ ಇಳುವರಿ ಹೆಚ್ಚಿಸಿ ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ಅನ್ನು 3050 ರೂ. ನಿಗದಿಪಡಿಸಿರುವುದು ರೈತರಿಗೆ ಕಹಿ ಸುದ್ದಿಯಾಗಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, 2022ರ ವಿದ್ಯುತ್ ಕಾಯ್ದೆ ಖಾಸಗೀಕರಣಗೊಳಿಸಿ ಹಣ ವಸೂಲಿಗೆ ಮುಂದಾಗಿರುವುದು ಆಕ್ಷೇಪಾರ್ಹವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಎಪಿಎಂಸಿ ಕಾಯ್ದೆ ಹಿಂಪಡೆಯಬೇಕು. 440 ರೂ. ವಿಮೆ ಕಟ್ಟಿದ್ದ ರೈತನಿಗೆ 160 ರೂ.ಮೆಕ್ಕೆಜೋಳದ ಪರಿಹಾರ ಬಂದಿರುವ ನಿದರ್ಶನವಿದೆ. ಹೀಗಾಗಿ ಫಸಲ್ ಭಿಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು. ರಾಜ್ಯದಲ್ಲಿ ಮಳೆಯಿಂದಾಗಿ ಅಂದಾಜು 10 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಕೇಂದ್ರ ತಂಡ ನಾಮ್‌ಕೇವಾಸ್ತೆ ಪರಿಶೀಲನೆ ನಡೆಸಿದ್ದು, ನಷ್ಟ ಅಂದಾಜು ಮಾಡಲು ವಿಫಲವಾಗಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಸಚಿವರು, ಅಧಿಕಾರಿಗಳು ಕಾಣೆಯಾಗಿದ್ದಾರೆ. ಇನ್ನಾದರೂ ನೈಜ ಸಮೀಕ್ಷೆ ನಡೆಸಿ ನಷ್ಟದ ಅಂದಾಜಿನ ಸಂಪೂರ್ಣ ಪರಿಹಾರ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.

25ಕ್ಕೆ ರೈತ ಮುಖಂಡರ ಅಧಿವೇಶನ: ದೇಶಾದ್ಯಂತ ರೈತ ಚಳವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಬೆಂಗಳೂರಿನ ಗಾಂಧಿ ಭವನದಲ್ಲಿ ಸೆ.25ರಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ರೈತ ಮುಖಂಡರ ಅಧಿವೇಶನ ಹಮ್ಮಿಕೊಳ್ಳಲಾಗಿದ್ದು, ವಿವಿಧ ರಾಜ್ಯಗಳ ಪ್ರಮುಖರು ಭಾಗವಹಿಸುವರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸಿ ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಕೃಷಿ ಉತ್ಪನ್ನ ಹಾಗೂ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು. ದೆಹಲಿ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಪರಿಹಾರ ಒದಗಿಸಬೇಕು. ಭರವಸೆಯಂತೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಬಲ್ಲೂರು ರವಿಕುಮಾರ್, ಹನುಮೇಗೌಡ, ಸಿ.ಬಿ.ಶಂಕರ್ ಪ್ರಸಾದ್, ಕುಮಾರಸ್ವಾಮಿ, ಅಂಜನಪ್ಪ ಇದ್ದರು.

ಸಾಲ ಮನ್ನಾ ಮಡಲಿ

ದೇಶದಲ್ಲಿ 3.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೋನಾ ಲಾಕ್‌ಡೌನ್, ಅತಿವೃಷ್ಟಿ ಮಳೆಹಾನಿ ಸಂಕಷ್ಟದಿಂದ ನಲುಗಿದ್ದು, ಉದ್ಯಮಿಗಳ ಮಾದರಿಯಲ್ಲೇ ರೈತರ ಸಾಲವನ್ನೂ ಮನ್ನಾ ಮಾಡಬೇಕು. ಆರ್‌ಬಿಐ ನಿಯಮದಂತೆ ರೈತರ ಸಾಲದ ಮೇಲೆ ಶೇ.25ರಷ್ಟು ಹೆಚ್ಚುವರಿ ಸಾಲ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net