ಮುಳಬಾಗಿಲು ಎಪಿಎಂಸಿ ಅಭಿವೃದ್ಧಿಗೆ 1.5 ಕೋಟಿ ರೂಪಾಯಿ, ಸಚಿವ ನಾಗೇಶ್ ಭರವಸೆ

11 mbl ph 2 a
Published on

ಮುಳಬಾಗಿಲು: ತಾಲೂಕಿನ ಎನ್. ವಡ್ಡಹಳ್ಳಿ ಉಪ ಮಾರುಕಟ್ಟೆಯಲ್ಲಿ ಕರೊನಾ ಸೋಂಕು ವೈರಾಣುಗಳ ನಿವಾರಣೆಗೆ ರಸಾಯನಿಕ ಬ್ಲೀಚಿಂಗ್ ಸಿಂಪಡಣೆ ಘಟಕ ನಿರ್ಮಿಸಲಾಗುವುದು ಎಂದು ಸಚಿವ ಎಚ್.ನಾಗೇಶ್ ತಿಳಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರೊನಾ ಸೋಂಕು ವೈರಾಣುಗಳ ನಿವಾರಣೆಗೆ ರಸಾಯನಿಕ ಬ್ಲೀಚಿಂಗ್ ಸಿಂಪಡಣೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಎಪಿಎಂಸಿಗೆ ಬರುವ ಪ್ರತಿಯೊಬ್ಬರೂ ಈ ಸಿಂಪಡಣೆಯೊಂದಿಗೆ ವಹಿವಾಟಿನಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕರೊನಾ ಸೋಂಕು ಸಾಯುತ್ತವೆ. ಮುಳಬಾಗಿಲು ಮತ್ತು ಎನ್.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ತಲಾ ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದರು.

ಆಂಧ್ರದ ಚಿತ್ತೂರು ಮತ್ತು ಪಲಮನೇರು ಕಡೆಗಳಲ್ಲಿ ಹೆಚ್ಚಿನ ಕರೊನಾ ಪ್ರಕರಣಗಳು ಕಂಡುಬರುತ್ತಿದ್ದು, ಆ ಭಾಗದವರು ತಾಲೂಕಿಗೆ ಬರದಂತೆ ಜಾಗೃತಿ ವಹಿಸಬೇಕು. ಹೆದ್ದಾರಿ ಮತ್ತು ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಮತ್ತಷ್ಟು ಬಿಗಿ ಮಾಡುತ್ತಿದ್ದರೂ ಬೇರೆ ಅಡ್ಡದಾರಿಗಳಲ್ಲಿ ಅಡ್ಡಾಡುವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು.

ಎಪಿಎಂಸಿ ನಿರ್ದೇಶಕ ನಗವಾರ ಎನ್.ಆರ್. ಸತ್ಯಣ್ಣ ಮಾತನಾಡಿ, ಎನ್.ವಡ್ಡಹಳ್ಳಿ ಉಪಮಾರುಕಟ್ಟೆಗೆ 60 - 80 ಸಾವಿರ ಬಾಕ್ಸ್‌ಗಳು ಟೊಮ್ಯಾಟೊ ಬರುತ್ತಿದ್ದು, ಬೆಲೆ ಇಲ್ಲದೆ ಇರುವುದರಿಂದ ಕೊಳ್ಳವರಿಲ್ಲದೇ ಹಾಗೆಯೇ ಉಳಿಯುತ್ತಿದೆ. ರೈತರು ಒಂದು ಬಾಕ್ಸ್ ತರಲು 50 ರೂ ಖರ್ಚು ಬರುತ್ತಿದೆ ಆ ಹಣವನ್ನಾದರೂ ಸರ್ಕಾರ ನೀಡಬೇಕು. ಖರೀದಿ ಮಾಡಿದ ಟೊಮ್ಯಾಟೊ ಹಾಗೂ ಇತರ ತರಕಾರಿಯನ್ನು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ನಿವಾಸಿಗಳಿಗೆ ಮನೆ ಬಾಗಿಲಿಗೆ ತಲುಪಿಸಿದರೆ ಜನರು ಮನೆಯಿಂದ ಹೊರಗೆ ಬರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸುವುದಾಗಿ ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್.ರಾಜೇಂದ್ರಗೌಡ, ಎಪಿಎಂಸಿ ಅಧ್ಯಕ್ಷ ಮೇಲಾಗಾಣೀ ಎಂ ವಿಶ್ವನಾಥಗೌಡ, ಉಪಾಧ್ಯಕ್ಷ ಮರಹೇರು ವೆಂಕಟರವಣಪ್ಪ, ನಿರ್ದೇಶಕರಾದ ಸಿ.ರಾಮಪ್ಪ, ಗೊಲ್ಲಹಳ್ಳಿ ಪಿ.ವೆಂಕಟೇಶ್, ಗುಮ್ಲಾಪುರ ಅಮರನಾರಾಯಣಸ್ವಾಮಿ, ಡಿವೈಎಸ್‌ಪಿ ಬಿ.ಎಂ.ನಾರಾಯಣಸ್ವಾಮಿ, ಸಿಪಿಐ ಎಸ್.ಟಿ. ಮಾರ್ಕೊಂಡಯ್ಯ, ಪಿಎಸ್‌ಐ ಎಂ.ಶ್ರೀನಿವಾಸ್, ವಕೀಲ ಕವತನಹಳ್ಳಿ ವಿನೋದ್ ಮತ್ತಿತರರು ಇದ್ದರು.

ಅಡ್ಡದಾರಿಗಳನ್ನು ಮುಚ್ಚಿ: ಗೂಕುಂಟೆಯಿಂದ ಕುಪ್ಪಂ ಪಾಳ್ಯದವರೆಗೂ ಆಂಧ್ರದಿಂದ ಅಡ್ಡದಾರಿಗಳಲ್ಲಿ ಗಡಿ ದಾಟಿ ರಾಜ್ಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟದಿದ್ದರೆ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ರೈತ ಮುಖಂಡ ಹೆಬ್ಬಣಿ ಎಂ ಗೋಪಾಲ್ ಸಚಿವರ ಗಮನಕ್ಕೆ ತಂದಾಗ ತಾಲೂಕು ಆಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಜೆಸಿಬಿಗಳ ಮೂಲಕ ಅಡ್ಡದಾರಿ ಮುಚ್ಚಬೇಕು. ಗೋಪಾಲ್ ಅವರೇ ಈ ಬಗ್ಗೆ ಉಸ್ತುವಾರಿ ನಡೆಸಿ ಮಾಹಿತಿ ನೀಡಬೇಕು ಎಂದು ನಾಗೇಶ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net