

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಭಿವೃದ್ಧಿ ಕೇವಲ ಮಾನವ ಕೇಂದ್ರಿತ ಆಗಬಾರದು. ಪ್ರಕೃತಿ ಕೇಂದ್ರಿತವಾದಾಗಲೇ ಪ್ರಕೃತಿಯ ರಕ್ಷಣೆ ಸಾಧ್ಯ. ಅಪ್ಪಿಕೋ ಚಳವಳಿ ಮಾದರಿ ಹೋರಾಟವಾಗಿದ್ದು, ಇದರ ಉದ್ದೇಶ ಇಡೀ ಪ್ರಕೃತಿಯನ್ನು ಗೌರವಿಸುವುದಾಗಿದೆ ಎಂದು ಅಪ್ಪಿಕೋ ಚಳವಳಿ ಪ್ರವರ್ತಕ ಮಹಾಬಲೇಶ್ವರ ಹೆಗಡೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶಿವಮೊಗ್ಗದ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಪರಿಸರಕ್ಕಾಗಿ ನಾವು ಧಾರವಾಡ ಜಿಲ್ಲೆ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿರುವ ಸಹ್ಯಾದ್ರಿ 2024ರ ರಾಜ್ಯ ಮಟ್ಟದ ಚಿಂತನ-ಮಂಥನ 2 ದಿನಗಳ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಪ್ಪಿಕೋ ಚಳವಳಿ ಹೋರಾಟಕ್ಕೆ ಅಪಾರ ಜನ ಬೆಂಬಲ ದೊರೆಯಿತು. ಈ ಹೋರಾಟವನ್ನು ಕಂಡ ಅಂದಿನ ಅರಣ್ಯ ಸಚಿವರು. ಅರಣ್ಯ ಪ್ರದೇಶದಲ್ಲೇ ಸಭೆ ನಡೆಸಿದ್ದಲ್ಲದೆ, 200 ಎಕರೆ ಅರಣ್ಯ ಪ್ರದೇಶ ಕಡಿಯದಂತೆ ಆದೇಶ ಮಾಡಿದ್ದರು. ಅಪ್ಪಿಕೋ ಚಳವಳಿ ಉದ್ದೇಶ ಕೇವಲ ಮರ ಕಡಿಯವುದನ್ನು ತಡೆಯುವುದಲ್ಲದೆ, ಇಡೀ ಪ್ರಕೃತಿಯನ್ನು ಗೌರವಿಸುವುದು, ಎಲ್ಲ ಜೀವಿಗಳನ್ನು ಗೌರವದಿಂದ ಕಾಣುವುದಾಗಿದೆ. ಚಳವಳಿಯಲ್ಲಿ ಕೇವಲ ಘೋಷಣೆ ಕೂಗುವುದಲ್ಲ. ಅದು ನಮ್ಮ ಜೀವನದ ಕ್ರಮವಾಗಬೇಕು. ಬೆಳೆಸು, ಉಳಿಸು, ಮಿತವಾಗಿ ಬಳಿಸು ಎಂಬುವುದು ನಮ್ಮ ಘೋಷಣೆಯಾಗಿತ್ತು ಎಂದರು.
ಪರಿಸರವಾದಿ ಜನಾರ್ಧನ ಜಿ.ಎಲ್. ಮಾತನಾಡಿ, ಚಿಪ್ಕೋ ಚಳವಳಿ ನಡೆಸಿ ಇಂದಿಗೆ 50 ವರ್ಷವಾಗಿದೆ. ಹಿಮಾಲಯದಲ್ಲಿ ಆರಂಭವಾದ ಚಳವಳಿ ದೇಶದ ಎಲ್ಲೆಡೆ ಹರಡಿಕೊಂಡು, ಪರಿಸರ ರಕ್ಷಣೆಗೆ ಮುಂದಾಗಿರುವುದು ಮಾದರಿಯಾಗಿದೆ ಎಂದರು.
ಶಾರದಾ ಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಎಲೆದಳ್ಳಿ, ಲಿನೆಟ್ ಡಿಸಿಲ್ವಾ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಸಂಜೀವ ಕುಲಕರ್ಣಿ, ಇತರರು, ಇದ್ದರು.
ನಂತರ ಜರುಗಿದ ನದಿ ಮತ್ತು ನೀರು ಗೋಷ್ಠಿಯಲ್ಲಿ ಬೆಂಗಳೂರಿನ ನಿರ್ಮಲಾಗೌಡ ವಿಷಯ ಮಂಡಿಸಿದರು. ಪಶ್ಚಿಮ ಘಟ್ಟದ ಜೀವ ವೈವಿಧ್ಯ ಗೋಷ್ಠಿಯಲ್ಲಿ ಸಾಗರದ ಅಖಿಲೇಶ ಚಿಪ್ಪಳಿ ವಿಷಯ ಮಂಡಿಸಿದರು. ಸಂಜೆ ಪರಿಸರಕ್ಕಾಗಿ ನಾವು- ಸಂಘಟನೆ ಕುರಿತು ಚರ್ಚೆ ನಡೆಯಿತು.