

ಕಡೂರು: ಕ್ಷುಲ್ಲಕ ಕಾರಣಕ್ಕಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರ ಅಳಿಯನ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಭಾನುವಾರ ತಡ ರಾತ್ರಿವರೆಗೂ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಬೆಳ್ಳಿಪ್ರಕಾಶ್ ಅವರ ಅಳಿಯ ಸಂದೇಶ್ ಭಾನುವಾರ ರಾತ್ರಿ 8.45ರ ವೇಳೆಗೆ ಪಟ್ಟಣ ಬಸವೇಶ್ವರ ವೃತ್ತದ ಸಮೀಪ ಕಾರಿನಲ್ಲಿ ತೆರಳುತ್ತಿದ್ದಾಗ ಕಾರೊಂದು ಅಡ್ಡ ನಿಂತಿರುವುದನ್ನು ಕಂಡು ಜಾಗ ಬಿಡುವಂತೆ ಕೇಳಿದ್ದಾರೆ. ಅಷ್ಟಕ್ಕೆ ಸಿಟ್ಟಿಗೆದ್ದ ಕಾರಿನಲ್ಲಿದ್ದ ಪಟ್ಟಣದ ವಾಸಿ ಸಂತೋಷ್ ಮತ್ತು ನಾಲ್ವರು ಯುವಕರ ಗುಂಪು ಸಂದೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ವಿಷಯ ತಿಳಿದು ಬೆಳ್ಳಿಪ್ರಕಾಶ್ ಕೂಡಲೇ ಕಡೂರು ಪೊಲೀಸ್ ಠಾಣೆಗೆ ಆಗಮಿಸಿ ಹಲ್ಲೆ ಮಾಡಿದವರನ್ನು ಕೂಡಲೇ ವಶಕ್ಕೆ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಳ್ಳಿ ಪ್ರಕಾಶ್ ಅವರ ಜತೆಗೆ ಬಂದ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಸೇರಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನನ್ನ ಅಳಿಯ ಯಾವ ರಾಜಕೀಯದಲ್ಲೂ ಇಲ್ಲ. ಅಂತಹವರ ಮೇಲೆ ಹಲ್ಲೆಯಾಗಿದೆ ಎಂದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಎಂದು ಬೆಳ್ಳಿಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚುವರಿ ಎಸ್‌ಪಿ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.