

ಕುಶಾಲನಗರ:
ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎನ್. ಕುಮಾರಪ್ಪ ಅಧ್ಯಕ್ಷತೆಯಲ್ಲಿ ರೈತ ಭವನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಈ ಸಂದರ್ಭ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆದವು. ಸಂಘ ಮತ್ತಷ್ಟು ಲಾಭ ಗಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಸದಸ್ಯರಾದ ವಿ.ಪಿ. ಶಶಿಧರ್, ಹೆಚ್.ಬಿ. ಚಂದ್ರಪ್ಪ, ಟಿ.ಬಿ. ಜಗದೀಶ್, ಶಿವಣ್ಣ, ಪೊನ್ನಪ್ಪ, ಕೆ.ಕೆ. ನಾಗರಾಜಶೆಟ್ಟಿ, ಪಾರ್ವತಿ, ಜರ್ಮಿ ಡಿಸೋಜ ಸೇರಿದಂತೆ ಹಲವು ಸದಸ್ಯರುಗಳು ಸಲಹೆಗಳನ್ನು ನೀಡಿದರು.
ಸಂಘದ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭಗಳು ನಡೆಸುವ ಸಂದರ್ಭ ಮಂಟಪ ಮೇಲ್ವಿಚಾರಕರ ಸಂಪರ್ಕಕ್ಕೆ ವಾಕಿಟಾಕಿ ವ್ಯವಸ್ಥೆ, ವಧು ವರರ ಕೊಠಡಿ ಬಳಿ ಸಿಸಿ ಟಿವಿ ಕ್ಯಾಮೆರ ಅಳವಡಿಕೆ, ಸಭಾಂಗಣ ಸೇರಿದಂತೆ ರೂಂಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಡೈನಿಂಗ್ ಹಾಲ್‌ನಲ್ಲಿ ಸ್ಟೋರ್ ರೂಂ ವ್ಯವಸ್ಥೆ ಒದಗಿಸಲು ಸದಸ್ಯರಿಂದ ಆಗ್ರಹಗಳು ಕೇಳಿಬಂತು. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಕ್ತ ಪರೀಕ್ಷಾ ಕೇಂದ್ರ ಆರಂಭಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಸಂಘ 1943 ರಲ್ಲಿ ಪ್ರಾರಂಭಗೊAಡು 82 ವರ್ಷಗಳನ್ನು ಪೂರೈಸಿದ್ದು ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ಕಾರ್ಯವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಸಂಘವು ಸದಸ್ಯರಿಗೆ, ಸದಸ್ಯರೇತರರಿಗೆ, ಬ್ಯಾಂಕಿAಗ್ ಸೌಲಭ್ಯ, ನಿಯಂತ್ರಿತ ಮತ್ತು ಅನಿಯಂತ್ರಿತ ಸಾಮಾಗ್ರಿ, ಅಗ್ಗದ ದರದಲ್ಲಿ ಗ್ರಾಹಕ ವಸ್ತು, ಗೊಬ್ಬರ, ಕ್ರಿಮಿನಾಶಕ, ಕೃಷಿ ಹತ್ಯಾರು, ಬಿತ್ತನೆ ಬೀಜ, ಕೋವಿ ತೋಟ, ಮೆಡಿಕಲ್ಸ್ ವಿಭಾಗ, ಸುಸಜ್ಜಿತ ರೈತ ಸಹಕಾರ ಭವನ ಮತ್ತು ಸುವರ್ಣ ಮಹೋತ್ಸವ ಸಭಾಂಗಣ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಹೊಂದಿದೆ. 2024-25 ನೇ ಸಾಲಿನಲ್ಲಿ ಒಟ್ಟು 69.76 ಕೋಟಿ ರೂ. ವಹಿವಾಟು ನಡೆಸಿ 48,79,928 ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಹೆಚ್.ಜೆ, ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ. ನೀಲಮ್ಮ, ಆರ್.ಕೆ.ಚಂದ್ರ, ಕೆ.ಎಸ್. ರತೀಶ್, ಹೆಚ್.ಟಿ. ನಾಗೇಶ್, ಹೆಚ್.ಟಿ. ಮೋಹನ್, ಸಿ.ಜಿ. ಲತಾ, ಪಿ.ಪಿ. ತಿಲಕ್ ಕುಮಾರ್, ಮೊಹಮ್ಮದ್ ಸಾಲೇಹ್, ಸಿ.ಎನ್. ಲೋಕೇಶ್, ಕೆಡಿಸಿಸಿ ಬ್ಯಾಂಕ್ ನಾಮ ನಿರ್ದೇಶಕಿ ಜಲಜಾ ಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇದ್ದರು.