

ಎನ್. ಮುನಿವೆಂಕಟೇಗೌಡ ಕೋಲಾರ
ಜಿಲ್ಲೆಯಲ್ಲಿ ಮಳೆಯಾಧಾರಿತ ಬೆಳೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಇದರಿಂದಾಗಿ ರೈತರು ಒಣಬೇಸಾಯದತ್ತ ತೀವ್ರ ನಿರಾಸಕ್ತಿ ವಹಿಸುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ಕೋಲಾರದಲ್ಲಿ ಅನ್ನದಾತರು ಹೆಚ್ಚಾಗಿ ಮಳೆಯಾಧಾರಿತ ಬೆಳೆಯ ಕೃಷಿಯನ್ನೇ ನಂಬಿದ್ದರು. ರಾಗಿ, ನೆಲಗಡಲೆ, ಅವರೆ, ತೊಗರಿ, ಅಲಸಂದೆೆ, ಹುರುಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಮಳೆಯಾಧಾರಿತ ಬೆಳೆ ಬೆಳೆಯಲು ಮುಂದೆ ಬರುತ್ತಿಲ್ಲ.
ಪ್ರತಿ ವರ್ಷವೂ ಮಳೆಯಲ್ಲಿ ಏರುಪೇರಾಗುವುದು, ಕೃಷಿ ಕಾರ್ಮಿಕರ ಕೊರತೆ ಹಾಗೂ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ರೈತರು ಹೆಚ್ಚು ನಷ್ಟಕ್ಕೊಳಗಾಗುತ್ತಿದ್ದಾರೆ. ಒಂದೆರಡು ವರ್ಷ ನಷ್ಟ ಅನುಭವಿಸುವ ರೈತರು ಮೂರನೇ ವರ್ಷ ಬೆಳೆ ಮಾಡಲು ಆಸಕ್ತಿ
ವಹಿಸುವುದಿಲ್ಲ. 2020-21ನೇ ಸಾಲಿಗೆ ಹೋಲಿಕೆ ಮಾಡಿದರೆ ಕಳೆದ ವರ್ಷ ಶೇ.50ರಷ್ಟು ಕೃಷಿ ಚಟುವಟಿಕೆಗಳು ಕ್ಷೀಣಿಸಿವೆ. ಈ ಬಾರಿ ಮುಂಗಾರು ಪೂರ್ವ ಮಳೆ ಬಿದ್ದು, 15 ದಿನಗಳಾದರೂ ರೈತರು ಈವರೆಗೆ ಒಣಬೇಸಾಯ ಕೃಷಿ ಚಟುವಟಿಕೆಗಳತ್ತ ಗಮನಹರಿಸುತ್ತಿಲ್ಲ.
ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲಿ ಜೋಡೆತ್ತುಗಳಿರುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆ ಎತ್ತುಗಳಿಂದ ಜಮೀನುಗಳಲ್ಲಿ ಉಳುಮೆ ಮಾಡಿ, ತಮ್ಮದೇ ಕೊಟ್ಟಿಗೆಯಲ್ಲಿನ ಗೊಬ್ಬರ ಹಾಕಿ ನೈಸರ್ಗಿಕವಾಗಿ ಕಡಿಮೆ ವೆಚ್ಚದಲ್ಲಿ ಬೆಳೆ ಬೆಳೆಯುತ್ತಿದ್ದರು. ಆದರೆ ಬದಲಾದ ಕಾಲಮಾನದಲ್ಲಿ ಎತ್ತುಗಳನ್ನು ಸಾಕುವವರ ಪ್ರಮಾಣ ಕಡಿಮೆಯಾಯಿತು. ಸದ್ಯ ಉಳುಮೆಗೆ ಟ್ರ್ಯಾಕ್ಟರ್ ಬಳಸುತ್ತಿದ್ದು ಕೊಟ್ಟಿಗೆ ಗೊಬ್ಬರದ ಬದಲಿಗೆ ರಾಸಾಯನಿಕ ಗೊಬ್ಬರ ಬಳಸುವುದರಿಂದ ಬೆಳೆಗಳಲ್ಲಿ ರೋಗ-ರುಜಿನಗಳ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದ ಉತ್ಪಾದನಾ ವೆಚ್ಚವೂ ದುಬಾರಿಯಾಗಿದೆ. ವರ್ಷದಿಂದ ವರ್ಷಕ್ಕೆ ಉತ್ಪಾದನೆ, ಕೂಲಿ ಹಾಗೂ ಕೃಷಿ ಚಟುವಟಿಕಗಳ ವೆಚ್ಚ ಹೆಚ್ಚಾಯಿತು. ಬೆಳೆಗೆ ಸರಿಯಾದ ಬೆಲೆ ಇರದ ಕಾರಣ ಆದಾಯ ಕುಂಠಿತಗೊಂಡಿತು. ಹಾಕಿದ ಬಂಡವಾಳವೂ ಕೈ ಸೇರದಂತಾಯಿತು, ಇದರಿಂದ ರೈತರು ಒಣಬೇಸಾಯದತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ.
ತೋಟಗಾರಿಕೆ ಬೆಳೆಗಳಿಗೆ ಆದ್ಯತೆ
ರೈತರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಾಗಿ ಆದ್ಯತೆ ಕೊಡುತ್ತಿರುವುದರಿಂದ ದವಸ, ಧಾನ್ಯಗಳು ಮತ್ತು ಕಾಳು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಮಾರುಕಟ್ಟೆಯ ಅನುಕೂಲ ಇರುವ ಕಾರಣ ಟೊಮ್ಯಾಟೊ ಹಾಗೂ ಮಾವು, ಹೂವಿನ ಬೆಳೆಗಳತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಕಳೆದ ಬಾರಿ ಟೊಮ್ಯಾಟೊ ಬೆಳೆಗೆ ಬಂಗಾರದ ಬೆಲೆ ಬಂದಿದ್ದ ಕಾರಣ ಈ ಬಾರಿಯೂ ತೋಟಗಾರಿಕೆ ಹಾಗೂ ತರಕಾರಿ ಬೆಳೆ ಬೆಳೆೆಯಲು ರೈತರು ಮುಂದಾಗುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮಾವು ಬೆಳೆಗೆ ವಾತಾವರಣ ಅನುಕೂಲವಿರುವವರು ಮಾವು ಬೆಳೆಯುತ್ತಿದ್ದಾರೆ.
ಹವಾಮಾನ ವೈಪರೀತ್ಯವೂ ಕಾರಣ
ಒಂದೊಂದು ಬಾರಿ ಅತಿವೃಷ್ಟಿಯಿಂದ ಬೆಳೆದ ಬೆಳೆಗಳು ನಾಶವಾದರೆ, ಕೆಲವು ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ರೈತರು ಬಿತ್ತನೆ ಕಾರ್ಯ ಮುಗಿದ ಬಳಿಕ ಮಳೆ ಕೈಕೊಟ್ಟು ಬೆಳೆಗಳು ಒಣಗಿಬಿಡುತ್ತವೆ. ಈ ರೀತಿಯ ಹವಾಮಾನ ವೈಪರೀತ್ಯದಿಂದ ರೈತ ಸಂಪೂರ್ಣ ನಷ್ಟಕ್ಕೆ ಗುರಿಯಾಗುತ್ತಾನೆ. ಕೆಲವು ಬಾರಿ ಮುಂಗಾರಿನಲ್ಲಿಯೇ ಮಳೆ ಕೈಕೊಡುವುದರಿಂದ ರೈತರು ಬಿತ್ತನೆ ಕಾರ್ಯ ಮಾಡುವುದನ್ನೇ ಕೈಬಿಡುತ್ತಾರೆ. ಇವುಗಳಿಂದ ರೈತರು ಮಳೆಯಾಧಾರಿತ ಬೆಳೆಗಳ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಇದರಿಂದ ಹೊರಬರಲು ನೀರಾವರಿಯತ್ತ ಮುಖಮಾಡುತ್ತಿದ್ದಾನೆ.
ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆಬಾರದೆ ಇರುವುದು, ಮಳೆ ಹೆಚ್ಚಾಗುವುದು, ರಾಗಿ ಸೇರಿದಂತೆ ಇತರ ಮಳೆಯಾಧಾರಿತ ಬೆಳೆಗಳನ್ನು ಬೆಳೆಯಲು ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ರೈತರು ಒಣಬೇಸಾಯದಿಂದ ಹಿಂದೆ ಸರಿಯುತ್ತಿದ್ದಾರೆ. ಆದರೂ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸೇರಿದಂತೆ ಉಳುಮೆ ಮಾಡಲು ಟ್ರ್ಯಾಕ್ಟರ್‌ಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ಬೆಳೆ ಪ್ರದೇಶ ವಿಸ್ತರಣೆಗೆ ರೈತರಿಗೆ ಅನುಕೂಲಗಳನ್ನು ಇಲಾಖೆ ಕಲ್ಪಿಸುತ್ತಿದೆ. ಕೂಲಿ ಖರ್ಚು ಹೆಚ್ಚಾಗಿರುವ ಕಾರಣ ಮನೆಗೆ ಬೇಕಾದಷ್ಟನ್ನು ಮಾತ್ರ ಬೆಳೆಯುತ್ತಿದ್ದಾರೆ. ಹಣದ ಸಂಪಾದನೆಗೆ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಅವಲಂಬಿಸುತ್ತಿದ್ದಾರೆ.
ನಾಗರಾಜರೆಡ್ಡಿ, ಉಪನಿರ್ದೇಶಕ, ಕೃಷಿ ಇಲಾಖೆ, ಕೋಲಾರ.