ಹರಿಕಥೆ ಕೇಳಲು ಜನರ ನಿರಾಸಕ್ತಿ

mysore
Published on

ಮೈಸೂರು: ಪ್ರಸ್ತುತ ಹರಿಕಥೆಗಳಿಗೆ ಕಿವಿಗೊಡದ ಪರಿಸ್ಥಿತಿ ಇದೆ ಎಂದು ಹಿರಿಯ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ಕಳವಳ ವ್ಯಕ್ತಪಡಿಸಿದರು.
ಕೃಷ್ಣಮೂರ್ತಿಪುರಂನ ರಾಘವೇಂದ್ರ ಆರಾಧನಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಲಲಿತಾ ಉಳಿಯಾರು ಅವರ 501ನೇ ಶಾಸ್ತ್ರೀಯ ಹರಿಕಥೆಗೆ ಚಾಲನೆ ನೀಡಿ ಮಾತನಾಡಿದರು.


ಹಳ್ಳಿಯ ಜನರು ರಾಮಾಯಣ, ಮಹಾಭಾರತದ ಪಾತ್ರಗಳ ಬಗ್ಗೆ ಮಾತನಾಡುತ್ತಿದ್ದರು, ಅದಕ್ಕೆ ಹರಿಕಥೆ ಕಾರಣ. ಹಳ್ಳಿಗಳಲ್ಲಿ ವ್ಯಾಜ್ಯಗಳಾದರೇ ಪಂಚಾಯಿತಿಯಲ್ಲಿಯೇ ತೀರ್ಪು ಕೊಡುತ್ತಿದ್ದರು. ಅದಕ್ಕೆ ಮಹಾಭಾರತ, ರಾಮಾಯಣ ಕಥೆಗಳು ಅವರಿಗೆ ಸ್ಫೂರ್ತಿ ನೀಡುತ್ತಿದ್ದವು. ಆದರೀಗ ಹರಿಕಥೆ ಕೇಳಲು ಜನರಿಗೆ ಆಸಕ್ತಿ ಇಲ್ಲವಾಗಿದೆ ಎಂದರು.


ರಾಮಾಯಣ, ಮಹಾಭಾರತದ ಬಗ್ಗೆ ಹಳ್ಳಿಗಳಲ್ಲಿ ಅರಿವು ಮೂಡಿಸಿತ್ತು ಹರಿಕಥಾ ಮಾಧ್ಯಮ. ನಮ್ಮ ಧರ್ಮ ಉಳಿಯಬೇಕಾದರೆ ಹರಿಕಥಾ ಮಾಧ್ಯಮವನ್ನು ಉಳಿಸಿ, ಬೆಳೆಸಬೇಕು. ನಮ್ಮ ದೇಶ ಇಡೀ ವಿಶ್ವದಲ್ಲಿಯೇ ಸಂಸ್ಕೃತಿಗೆ ಹೆಸರಾದುದು. ಅದು ಬಂದಿರುವುದು ಸನಾತನ ಧರ್ಮದಿಂದ. ನಮ್ಮ ಸಂಸ್ಕೃತಿ ಹೋದರೆ ನಮ್ಮ ಅಸ್ತಿತ್ವವೇ ಹೋದಂತೆ ಎಂದು ಅವರು ಎಚ್ಚರಿಸಿದರು.


ಎಷ್ಟೇ ದೀಪ ಹಚ್ಚಿದರೂ ಸೂರ್ಯನಿಲ್ಲದೆ ಹಗಲಾಗದು. ಸೂರ್ಯನಿಲ್ಲದೆ ಮಳೆ-ಬೆಳೆಯೂ ಆಗದು. ಮಳೆ ಬರುವುದು, ನಿಲ್ಲುವುದು ಯಾರಿಂದ ಎಂಬುದನ್ನು ಜನ ಅರಿತಿಲ್ಲ. ಅವರಿಗೆಲ್ಲ ಲಕ್ಷ್ಮೀ ಬೇಕು, ಲಕ್ಷ್ಮಿಪತಿ ಬೇಡ, ನವಕೋಟಿ ಬೇಕು, ನಾರಾಯಣ ಬೇಡ ಎಂಬ ಪರಿಸ್ಥಿತಿ ಇದೆ. ಜನರನ್ನು ಎಚ್ಚರಿಸಬೇಕೇ ಹೊರತು ಪ್ರಚೋದಿಸಬಾರದು ಎಂದು ಸಲಹೆ ನೀಡಿದರು.


ವಿಜಯವಿಠಲ ವಿದ್ಯಾಸಂಸ್ಥೆ, ಬಿಎಸ್‌ಎಸ್ ವಿದ್ಯೋದಯ ಶಾಲೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್, ಸದ್ವಿದ್ಯಾ ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ಡಿ.ಗೋಪಿನಾಥ್, ಮಲ್ಟಿ ಲಿಂಕ್ ಪ್ಲಾಂಟ್ ಹೆಡ್ ಗಿರೀಶ್ ಕುಲಕರ್ಣಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net