

ಉಡುಪಿ: ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹವಿದ್ಯುತ್ ಬಳಕೆದಾರರು ನಿರಾಸಕ್ತಿ ವಹಿಸಿದ್ದಾರೆ. ದಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 10,26,853 ಮಂದಿ ಗ್ರಾಹಕರಲ್ಲಿ ಕೇವಲ 2063 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ಈ ವರ್ಷ ಬಜೆಟ್ನಲ್ಲಿ ಒಂದು ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ ಯೋಜನೆ ಜಾರಿಗೊಳಿಸಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದೆ. ಇದರಿಂದ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು ಯೋಜನೆ ಉದ್ದೇಶ.
4 ಜಿಲ್ಲೆಯಲ್ಲಿ 2717 ಅರ್ಜಿ
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಲ್ಲಿ ಮೆಸ್ಕಾಂ ವ್ಯಾಪ್ತಿಯ ಉಡುಪಿ, ದ.ಕ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 2717 ಅರ್ಜಿಗಳು ಸಲ್ಲಿಕೆಯಾಗಿದ್ದು, 2329 ಅರ್ಜಿಗಳಿಗೆ ಅನುಮೋದನೆ ಲಭಿಸಿದೆ. ಇದರಿಂದ ಒಟ್ಟು 1344.33 ಕಿ. ವ್ಯಾಟ್ ಉತ್ಪಾದನಾ ಸಾಮರ್ಥ್ಯದ 317 ಯೋಜನೆಗಳು ಅನುಷ್ಠ್ಠಾನಗೊಳ್ಳಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1314 ಅರ್ಜಿಗಳಲ್ಲಿ 1138 ಅರ್ಜಿಗಳು ಅನುಮೋದನೆಗೊಂಡಿದ್ದು, ಈಗಾಗಲೇ 198 ಮನೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ 749 ಅರ್ಜಿಗಳ ಪೈಕಿ 658 ಅರ್ಜಿಗಳು ಅನುಮೋದನೆಗೊಂಡಿದ್ದು, 108 ಮನೆಗಳಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆ ನಿರ್ಮಿಸಲಾಗಿದೆ.
ಗ್ರಾಹಕರಿಗೇನು ಲಾಭ?
ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯವಿಲ್ಲ. ನಿರ್ವಹಣೆ ವೆಚ್ಚ ಕೂಡ ತೀರಾ ಕಡಿಮೆಯಾಗಿದ್ದು, 1 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30 ಸಾವಿರ ರೂ. ಸಬ್ಸಿಡಿ ಹಾಗೂ 2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60 ಸಾವಿರ ರೂ. ಸಬ್ಸಿಡಿ ದೊರೆಯಲಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ 78 ಸಾವಿರ ರೂ. ಸಬ್ಸಿಡಿ ಮಿತಿ ನಿಗದಿಪಡಿಸಲಾಗಿದೆ.