ಮತದಾನದಲ್ಲಿ ನಗರದ ಜನರ ನಿರಾಸಕ್ತಿ...!

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಈ ಬಾರಿಯಾದರೂ ಮತ ಪ್ರಮಾಣ ಏರಿಕೆಯಾಗಲಿದೆಯೇ? ನಗರ ಪ್ರದೇಶದ ಜನರು ಮತಗಟ್ಟೆಗಳಿಗೆ ಬಂದು ವೋಟ್ ಹಾಕುವರೇ…?


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಕಸರತ್ತು ಸಹ ಮಾಡಲಾಗುತ್ತಿದೆ.


ಜಿಲ್ಲಾ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯು ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ಹರಸಾಹಸ ಮಾಡುತ್ತಿದೆ. ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಪ್ರೇರೇಪಿಸುತ್ತಿದೆ.


ಮತದಾನ ಜಾಗೃತಿ ಮೂಡಿಸುವ ಜತೆಗೆ ಮತಗಟ್ಟೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಸುಸಜ್ಜಿತ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ನೆರಳು, ವಿಶ್ರಾಂತಿ ಕೊಠಡಿ, ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಶೇಷ ಮತಗಟ್ಟೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗುತ್ತಿದೆ.


ಇದೇ ರೀತಿ ಹಿಂದಿನಿಂದಲೂ ಸಿದ್ಧತೆ, ಜಾಗೃತಿ ಮೂಡಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಮತದಾನ ಏರಿಕೆಯಾಗುತ್ತಿಲ್ಲ. ಅದರಲ್ಲೂ ನಗರ ಪ್ರದೇಶದಲ್ಲೇ ಕಡಿಮೆ ಮತದಾನವಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗುತ್ತಿದೆ. ಹೀಗಾಗಿ, ಈ ಬಾರಿ ಮಾಡುತ್ತಿರುವ ವಿಶೇಷ ಕ್ರಮಗಳು ಮತದಾರರನ್ನು ಸೆಳೆಯಲು ಸಫಲವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳ್ಳಬೇಕಾದರೆ ಚುನಾವಣೆಯಲ್ಲಿ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಆದರೆ, ವಿದ್ಯಾವಂತರು, ನಗರವಾಸಿಗಳೇ ಮತ ಚಲಾವಣೆಯಿಂದ ದೂರ ಉಳಿಯುತ್ತಿರುವುದು ಕಳವಳಕಾರಿ. ಇದರಿಂದಲೇ ಮತದಾನ ಕಡಿಮೆ ಆಗುತ್ತಿದೆ.


‘ನಾವು ಮತ ಚಲಾಯಿಸದಿದ್ದರೆ ಏನು ಆಗೋದಿಲ್ಲ’ ಎಂಬ ಉದಾಸೀನ ಭಾವ ಸಾಕಷ್ಟು ಜನರಲ್ಲಿ ಬೇರೂರಿದೆ. ಆದರೆ, ಒಂದು ಮತ ಕೂಡ ಅಭ್ಯರ್ಥಿಯೊಬ್ಬರ ಹಣೆಬರಹ ಬದಲಿಸುತ್ತದೆ. ಇದಕ್ಕೆ ಈ ಹಿಂದಿನ ಸಂತೇಮರಹಳ್ಳಿ ವಿಧಾನಸಭೆ ಚುನಾವಣೆ ಸಾಕ್ಷಿ. ಆದ್ದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಬೇಕು.


ವಾರಾಂತ್ಯದ ಬದಲು, ಅದಕ್ಕೂ ಮುನ್ನ ದಿನವಾದ ಶುಕ್ರವಾರ(ಏಪ್ರಿಲ್ 10) ಕ್ಷೇತ್ರದ ಚುನಾವಣೆ ನಿಗದಿಪಡಿಸಲಾಗಿದೆ. ವೋಟ್ ಹಾಕಲು ಅನುಕೂಲಕ್ಕಾಗಿ ಕೊಟ್ಟ ರಜೆಯನ್ನೂ ಪ್ರವಾಸಕ್ಕೆ ಹೋಗದಂತೆ ಈ ಸಲ ಕಡಿವಾಣ ಹಾಕಲಾಗಿದೆ. ಮತದಾರರು ಸಹ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗಿದೆ. ದೇಶದ ಪ್ರಜೆಯಾಗಿ ಮತದಾನದಿಂದ ವಿಮುಕ್ತವಾಗಬಾರದು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳಬೇಕು.

ಹಳ್ಳಿ ಜನರಲ್ಲಿ ಹೆಚ್ಚಿನ ಉತ್ಸಾಹ


ಪ್ರತಿ ಸಲವೂ ನಗರ ಪ್ರದೇಶದಲ್ಲಿ ಮತದಾನಕ್ಕೆ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಅದರಲ್ಲೂ ವಿದ್ಯಾವಂತರು ಹೆಚ್ಚಿರುವ ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲೇ ಮತದಾನ ಪ್ರತಿ ಬಾರಿಯೂ ಕಡಿಮೆಯಾಗುತ್ತಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶವನ್ನು ಹೊಂದಿರುವ ಚಾಮುಂಡೇಶ್ವೇರಿ ಕ್ಷೇತ್ರದಲ್ಲಿ ಕೊಂಚ ಮತದಾನ ಸುಧಾರಣೆ ಕಾಣುತ್ತಿದೆ.

ಉಳಿದಂತೆ ಪಿರಿಯಾಪಟ್ಟಣದಲ್ಲಿ ಪ್ರತಿ ಸಲವೂ ಶೇ.75ಕ್ಕಿಂತ ಅಧಿಕ ಮತದಾನವಾಗಿದೆ. ಹುಣಸೂರು ಕ್ಷೇತ್ರದಲ್ಲೂ 60ಕ್ಕಿಂತ ಹೆಚ್ಚಿನ ಮತದಾನವಾಗಿದೆ. ಕೊಡಗು ಜಿಲ್ಲೆಯಲ್ಲಿ ಶೇ.60ಕ್ಕಿಂತ ಹೆಚ್ಚಿನ ಮತದಾನ ದಾಖಲಾಗಿದೆ. ಈ ಅಂಕಿ-ಅಂಶವನ್ನು ಗಮನಿಸಿದರೆ ಗ್ರಾಮಾಂತರ ಪ್ರದೇಶದವರು ಮತದಾನಕ್ಕೆ ಉತ್ಸುಕತೆ ತೋರಿದ್ದರೆ, ನಗರ ಪ್ರದೇಶದವರು ನಿರಾಸಕ್ತಿ ತೋರುತ್ತಿರುವುದು ಸ್ಪಷ್ಟವಾಗುತ್ತಿದೆ. ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಿರುವುದು ಚಿಂತೆಗೀಡು ಮಾಡಿದೆ.

ಮಹಿಳೆಯರ ನಿರಾಸಕ್ತಿ


ಮತದಾನದ ಹಕ್ಕು ಚಲಾಯಿಸುವಲ್ಲಿ ಪುರುಷ ಮತದಾರರು ಮುಂದಿದ್ದು, ಸಾಕಷ್ಟು ಮಹಿಳಾ ಮತದಾರರು ಮತಗಟ್ಟೆ ಕಡೆ ಮುಖ ಮಾಡಲು ಹೆಚ್ಚಿನ ಆಸಕ್ತಿ ತೋರಲಿಲ್ಲ. ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆ. ಆದರೆ, ಮತದಾನ ಮಾಡಲು ಪುರುಷರು ತೋರಿದಷ್ಟು ಆಸಕ್ತಿಯನ್ನು ಮಹಿಳಾ ಮತದಾರರು ತೋರಲಿಲ್ಲ. 2014ರಲ್ಲಿ 13,11,930 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಈ ಪೈಕಿ 6,64,712 ಪುರುಷರು, 6,47,203 ಮಹಿಳೆಯರು, 14 ತೃತೀಯಲಿಂಗಿಗಳು ಮತದಾನ ಮಾಡಿದ್ದರು. ಇದುವೇ ಪುರುಷ, ಮಹಿಳಾ ಮತದಾರರಲ್ಲಿರುವ ಆಸಕ್ತಿಯ ವ್ಯತ್ಯಾಸವನ್ನು ತೋರಿಸುತ್ತದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಕ್ರಮ ವಹಿಸಿದ್ದು, ಇದರೊಂದಿಗೆ ಮತದಾನದ ಶೇಖಕವಾರು ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಸ್ವೀಪ್ ವತಿಯಿಂದ ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ.
ಕೆ.ಎಂ.ಗಾಯತ್ರಿ ಅಧ್ಯಕ್ಷೆ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಪಂ ಸಿಇಒ

ಕಳೆದ 3 ಚುನಾವಣೆಯ ಮತದಾನದ ವಿವರ
ವಿಧಾನಸಭಾ ಕ್ಷೇತ್ರ 2009 2014 2019
ಮಡಿಕೇರಿ ಶೇ.67.50, ಶೇ.67.50 ಶೇ.75.00,
ವಿರಾಜಪೇಟೆ ಶೇ.60.30, ಶೇ.60.30 ಶೇ.72.23
ಪಿರಿಯಾಪಟ್ಟಣ ಶೇ. 75.35, ಶೇ.75.35 ಶೇ.78.60
ಹುಣಸೂರು ಶೇ.70.54, ಶೇ.70.54, ಶೇ.77.45,
ಚಾಮುಂಡೇಶ್ವರಿ ಶೇ.62.80, ಶೇ.67.26 ಶೇ.71.75,
ಕೃಷ್ಣರಾಜ ಶೇ.51.26, ಶೇ.51.26 ಶೇ.60.36,
ಚಾಮರಾಜ ಶೇ.47.61, ಶೇ.47.61,, ಶೇ.56.00
ನರಸಿಂಹರಾಜ ಶೇ. 44.39 ಶೇ.44.39 ಶೇ.59.89

ಒಟ್ಟು ಶೇ.56.62 ಶೇ.67.21 ಶೇ.68.14

ಮತದಾರ ವಿವರ


ವಿಧಾನಸಭಾ ಕ್ಷೇತ್ರ ಪುರುಷರು ಮಹಿಳೆಯರು ಇತರ ಒಟ್ಟು
ಮಡಿಕೇರಿ 1,15,159 1,21,394 9 2,36,562
ವಿರಾಜಪೇಟೆ 1,13,319 1,16,266 7 2,29,592
ಪಿರಿಯಾಪಟ್ಟಣ 98,447 98,764 7 1,97,215
ಹುಣಸೂರು 12,284 1,24,208 16 2,46,508
ಚಾಮುಂಡೇಶ್ವರಿ 1,71,090 1,74,196 34 3,45,320
ಕೃಷ್ಣರಾಜ 1,24,419 1,31,168 28 2,55,615
ಚಾಮರಾಜ 1,24,897 1,29,996 32 2,54,925
ನರಸಿಂಹರಾಜ 1,47,505 1,59,043 52 3,06,600
ಒಟ್ಟು 10,17,120 10,55,035 182 20,72,337

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net