

ಮಡಿಕೇರಿ:
ದೇಶದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆ ಮಾದರಿಯಲ್ಲಿ ರಾಜ್ಯದಲ್ಲೂ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಜಾರಿಯಲ್ಲಿದೆ. ಹೊಸ ಪರಿಕಲ್ಪನೆಗಳಡಿಯಲ್ಲಿ ಉದ್ಯಮ ಸ್ಥಾಪಿಸುವ ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆ ಅನುಷ್ಠಾನದಲ್ಲಿದ್ದು, ಹೊಸತನದ ಉದ್ಯಮಗಳನ್ನು ಶುರು ಮಾಡುವವರಿಗೆ ಸರ್ಕಾರ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತದೆ. ಈ ಅವಕಾಶ ಬಳಸಿಕೊಂಡು ಕರ್ನಾಟಕದಲ್ಲಿ ಒಟ್ಟು ೨೬೬೩ ನವೋದ್ಯಮಗಳು ಆರಂಭವಾಗಿದ್ದರೆ, ಕೊಡಗಿನಲ್ಲಿ ಇದಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬಂದಿದೆ. ಕೇವಲ ೩ ನವೋದ್ಯಮಗಳು ಮಾತ್ರ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಅಡಿಯಲ್ಲಿ ಪ್ರಾರಂಭಿಸಲಾಗಿದೆ.
ಒಳ್ಳೆಯ ಓದಿಗೆ ಉನ್ನತ ಹುದ್ದೆ, ಕೈ ತುಂಬಾ ಸಂಬಳ ಸಿಗುತ್ತಿದ್ದರೂ ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಬೇಕೆನ್ನುವ ಕಸಿವಿಸಿ ಕೆಲವು ಪ್ರತಿಭಾವಂತರನ್ನು ಕಾಡುತ್ತಿರುತ್ತದೆ. ಇಂಥವರು ಸ್ವಂತದ್ದೊಂದು ಉದ್ಯಮ ನಡೆಸುತ್ತಾ ತಾನೇ ಬಾಸ್ ಆಗಿರಬೇಕು, ತನಗೆ ಯಾರ ಅಂಕುಶವೂ ಇರಬಾರದು ಎನ್ನುವ ಕನಸು ಕಾಣುತ್ತಿರುತ್ತಾರೆ. ಹಾಗಾಗಿಯೇ ಈಗಿನ ಯುವ ತಲೆಮಾರು ಸ್ವಂತ ಉದ್ದಿಮೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ನವನವೀನ ಪರಿಕಲ್ಪನೆಗಳ ಅಡಿಯಲ್ಲಿ ಸ್ಟಾರ್ಟ್‌ಅಪ್‌ಗಳು ಆರಂಭವಾಗುತ್ತಿದ್ದು. ಭಾರತದ ಸ್ಟಾರ್ಟ್ ಅಪ್ ಹಬ್ ಎಂದೇ ಖ್ಯಾತವಾಗಿದೆ. ಬೆಂಗಳೂರು ಸೇರಿದಂತೆ ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಹೀಗೆ ಹೆಚ್ಚಾಗಲು ಕೇಂದ್ರ ಸರ್ಕಾರ ೨೦೧೬ರಲ್ಲಿ ಜಾರಿಗೆ ತಂದ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆ ಕೂಡ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ನವೋದ್ಯಮಿಗಳಿಗೆ ಬೆಂಬಲ, ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸುವುದಲ್ಲದೆ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆವಿಷ್ಕಾರ ಮತ್ತು ವಿನೂತನ ಯೋಚನೆಗಳ ಮೂಲಕ ಬೆಳವಣಿಗೆ ಹೊಂದಲು ಈ ಯೋಜನೆಯ ಸಹಾಯದಿಂದ ಸ್ಟಾರ್ಟ್ ಅಪ್‌ಗಳಿಗೆ ಸರ್ಕಾರ ನೆರವು ನೀಡುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಜಾರಿಯಲ್ಲಿದೆ. ಬೆಂಗಳೂರು ಕೇಂದ್ರೀಕೃತ ನವೋದ್ಯಮಗಳನ್ನು ರಾಜಧಾನಿಯಿಂದ ಹೊರಗೆ ಇತರ ಜಿಲ್ಲೆಗಳಲ್ಲೂ ಶುರು ಮಾಡುವ ಮೂಲಕ ರಾಜ್ಯದ ಸಮಾನ ಅಭಿವೃದ್ಧಿಯ ಕನಸಿನೊಂದಿಗೆ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಆರಂಭಿಸಲಾಗಿದೆ.
ಕರ್ನಾಟಕದಲ್ಲಿ ಉತ್ಪನ್ನ ಸ್ಟಾರ್ಟ್ ಅಪ್‌ಗಳನ್ನು ಒಳಗೊಂಡಂತೆ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸಲು ೫೦ ಲಕ್ಷ ರೂ. ತನಕ ಅನುದಾನ ನೀಡಿ ಪ್ರೋತ್ಸಾಹಿಸುವುದು, ಸ್ಟಾರ್ಟ್ ಅಪ್‌ಗಳಲ್ಲಿರುವ ನ್ಯೂನತೆಗಳನ್ನು ಗುರುತಿಸಿ, ಅಗತ್ಯವಾದ ಮಾರ್ಗದರ್ಶನ, ಜ್ಞಾನ ಮತ್ತು ಸಂಪರ್ಕ ಜಾಲವನ್ನು ಸ್ಪಷ್ಟ ರೂಪುರೇಷೆಯೊಂದಿಗೆ ಒದಗಿಸಲು ಪರಿಪೋಷಣಾ ಕೇಂದ್ರ, ಟಿಬಿಐ ಹಾಗೂ ವಿದ್ಯಾರ್ಥಿಗಳಲ್ಲಿ ನಾವೀನ್ಯತೆಗಳನ್ನು ಮೂಡಿಸಲು ಇಂಜಿನಿಯರಿಂಗ್ ಕಾಲೇಜು ಮತ್ತು ವಿದ್ಯಾ ಸಂಸ್ಥೆಗಳಲ್ಲಿ ಸ್ಥಾಪಿಸಿರುವ ಎನ್‌ಎಐಎನ್ ಕೇಂದ್ರಗಳಲ್ಲಿ ಸ್ಟಾರ್ಟ್ ಅಪ್‌ಗಳಿಗೆ ವಾಣಿಜ್ಯಿಕ ಒತ್ತು ನೀಡುವುದು ಮತ್ತಿತರ ಬೆಂಬಲವನ್ನು ನವೋದ್ಯಮಿಗಳಿಗೆ ಕರ್ನಾಟಕ ಸ್ಟಾರ್ಟ್‌ಅಪ್ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
ನವೋದ್ಯಮ ಆರಂಭಿಸುವವರಿಗೆ ಮುಖಾಮುಖಿ ಮಾರ್ಗದರ್ಶನ ಗೋಷ್ಠಿಗಳು, ಕಮ್ಮಟಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಸಂಪರ್ಕ ಜಾಲ ಸಮಾವೇಶಗಳು ಅಂತರ ರಾಷ್ಟ್ರೀಯ ಪಾಲುದಾರಿಕೆ ಸಭೆಗಳು, ಬೂಟ್ ಕ್ಯಾಂಪ್‌ಗಳು, ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ಹೊರ ವಲಯಗಳಲ್ಲಿ ಮೂಲ ಸೌಕರ್ಯ ಒದಗಿಸುವಿಕೆ ಇತ್ಯಾದಿ ಅನುಕೂಲ ಕಲ್ಪಿಸಲಾಗುತ್ತದೆ. ಪರಿಪೋಷಣಾ ಕೇಂದ್ರಗಳಲ್ಲಿ ಸ್ಟಾರ್ಟ್‌ಅಪ್‌ನ ಅಗತ್ಯತೆಗನುಗುಣವಾಗಿ ಸಲಹೆಗಾರರನ್ನು ಗುರುತಿಸಿ ಆ ಸಲಹೆಗಾರರು ಮತ್ತು ಸ್ಟಾರ್ಟ್ ಅಪ್‌ಗಳೊಂದಿಗೆ ಪರಿಚಯ ಮತ್ತು ಚರ್ಚೆ ಏರ್ಪಡಿಸಲಾಗುತ್ತದೆ. ಆರೋಗ್ಯ ಪಾಲನೆ, ಆಹಾರ ಭದ್ರತೆ, ಶುದ್ಧ ಪರಿಸರ ಹಾಗೂ ಎಲ್ಲರಿಗೂ ಶಿಕ್ಷಣ ಇತ್ಯಾದಿ ವಲಯಗಳಲ್ಲಿ ಸಾಮಾಜಿಕ ಪರಿಣಾಮವಿರುವ ನಾವೀನ್ಯತಾ ತಂತ್ರಜ್ಞಾನ ಪರಿಹಾರಗಳನ್ನು ಗ್ರಾಂಡ್ ಚಾಲೆಂಜ್ ಕರ್ನಾಟಕ ಮುಖಾಂತರ ನೀಡಲಾಗುತ್ತದೆ.
ಮೊದಲ ಮೂರು ವರ್ಷಗಳವರೆಗೆ ರಾಜ್ಯ ಜಿಎಸ್‌ಟಿ ಮೊತ್ತದಲ್ಲಿ ಹಿಂಪಾವತಿ, ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ವೆಚ್ಚದಲ್ಲಿ ೫ ಲಕ್ಷ ರೂ. ತನಕ ಹಿಂಪಾವತಿ,ಪೇಟೆಂಟ್ ಪಡೆಯಲು ತಗುಲಿದ ವೆಚ್ಚದಲ್ಲಿ ೧೦ ಲಕ್ಷ ರೂ. ತನಕ ಹಿಂಪಾವತಿ, ಗುಣಮಟ್ಟದ ಪ್ರಮಾಣೀಕರಣ ಪತ್ರಕ್ಕೆ ತಗುಲಿದ ವೆಚ್ಚದಲ್ಲಿ ೬ ಲಕ್ಷ ರೂ.ವರೆಗೆ ಹಿಂಪಾವತಿ, ಸ್ಟಾರ್ಟ್‌ಅಪ್ ಉದ್ಯಮಿಗಳಿಗೆ ಬೂಸ್ಟರ್‌ಕಿಟ್ ಒದಗಿಸುವುದು, ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ನೋಂದಣಿಯಾದ ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಸ್ಟಾರ್ಟ್‌ಅಪ್ ಕರ್ನಾಟಕ ಕೋಶದ ಅಂತರ್‌ಜಾಲದಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು, ಸ್ಟಾರ್ಟ್ ಅಪ್ ಉದ್ಯಮಿಗಳ ಕುಂದುಕೊರತೆ ನಿವಾರಣೆಗಾಗಿ ಪ್ರತ್ಯೇಕವಾದ ವೇದಿಕೆ ಸೃಷ್ಟಿ ಸೇರಿದಂತೆ ಅನೇಕ ಸವಲತ್ತುಗಳನ್ನೂ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಅಡಿಯಲ್ಲಿ ಕೊಡಲಾಗುತ್ತಿದೆ.
ಬೆಂಗಳೂರಿನಿಂದ ಹೊರಗೂ ನವೋದ್ಯಮಗಳು ವಿಸ್ತರಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದ ಸರ್ಕಾರ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಜಾರಿ ಮಾಡಿ ವಿವಿಧ ಸವಲತ್ತುಗಳನ್ನು ಕೊಡುತ್ತಿದ್ದರೂ ಮತ್ತೆ ಈ ಯೋಜನೆಯ ಲಾಭವನ್ನು ಬೆಂಗಳೂರು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಈ ಯೋಜನೆ ಅಡಿಯಲ್ಲಿ ಆರಂಭವಾಗಿರುವ ನವೋದ್ಯಮಗಳ ಪೈಕಿ ಶೇ. ೭೫ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲೇ ಕಾರ್ಯಾಚರಿಸುತ್ತಿವೆ. ಉಳಿದವು ಮೈಸೂರು ಸೇರಿದಂತೆ ರಾಜ್ಯದ ಮಹಾನಗರಗಳಿಗೆ ಹಂಚಿಕೆಯಾಗಿದ್ದು, ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ನವೋದ್ಯಮಗಳು ಯೋಜನೆಯ ಲಾಭ ಪಡೆದುಕೊಂಡಿವೆ.
ಸ್ಟಾರ್ಟ್‌ಅಪ್ ಸ್ಥಾಪನೆಗೆ ಸರ್ಕಾರ ಸಾಕಷ್ಟು ಅನುಕೂಲಗಳನ್ನು ಮಾಡಿ ಕೊಡುತ್ತಿದ್ದರೂ ಕೊಡಗಿನಲ್ಲಿ ಕೇವಲ ೩ ನವೋದ್ಯಮಗಳು ಸ್ಟಾರ್ಟ್ ಅಪ್ ಕರ್ನಾಟಕ ಯೋಜನೆಯನ್ನು ಬಳಸಿಕೊಂಡಿವೆ. ಮೂಲತಃ ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮೊದಲಿನಿಂದಲೂ ಕೈಗಾರಿಕೆಗಳ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆ ಕುಶಾಲನಗರ ತಾಲೂಕು ಕೂಡ್ಲೂರುವಿನಲ್ಲಿದ್ದು, ಇಲ್ಲಿ ಬಹುತೇಕ ಕಾಫಿ ಮತ್ತು ಕಾಫಿ ಉಪ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಕೈಗಾರಿಕೆಗಳಲ್ಲಿ ಉದ್ಯೋಗವಕಾಶ ಸೀಮಿತವಾಗಿದ್ದು, ಉದ್ಯೋಗ ಅರಸಿ ಜಿಲ್ಲೆಯಿಂದ ಹೊರಹೋಗುವವರ ಸಂಖ್ಯೆ ಹೆಚ್ಚು ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶದ ಬಾಗಿಲು ತೆರೆದಿದೆ.
ಕೇಂದ್ರ ಸರ್ಕಾರದ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಕೊಡಗಿನಲ್ಲಿ ಕಾಫಿಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯೂ ಸಾಕಷ್ಟು ಅವಕಾಶಗಳಿದ್ದರೂ ಕೊಡಗಿನವರು ಇದನ್ನು ಬಳಸಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ ಸ್ಟಾರ್ಟ್‌ಅಪ್ ಕರ್ನಾಟಕ ಯೋಜನೆ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರ ಮಾಡಿದರೆ ಕೊಡಗಿನಲ್ಲೂ ನವೋದ್ಯಮಗಳ ಆರಂಭಕ್ಕೆ ಕಾರಣ ಆಗಬಹುದು. ಸ್ಥಳೀಯವಾಗಿಯೇ ಇನ್ನಷ್ಟು ಉದ್ಯೋಗವಕಾಶಗಳು ಸೃಷಿಯಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.