ಕೆರೆ ಸೇರುತ್ತಿದೆ ಅಪಾರ್ಟ್‌ಮೆಂಟ್ ತ್ಯಾಜ್ಯ

1
ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಕೃಷ್ಣಾಪುರ ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಕೆರೆ ಕಲುಷಿತಗೊಂಡಿದೆ.
Published on

ಮಲೀನ ನೀರಿನ ಸಂಗ್ರಹದಿಂದ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ

ಆನೇಕಲ್: ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಕೃಷ್ಣಾಪುರ ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.

ರಾಮಕೃಷ್ಣಾಪುರ ಕೆರೆಯು 10 ಎಕರೆ ವಿಸ್ತೀರ್ಣದಲ್ಲಿದ್ದು ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ನೀರಿನ ಬಣ್ಣವೇ ಬದಲಾಗಿ ಗಬ್ಬು ನಾರುತ್ತಿದೆ. ಕೆರೆಯ ಪ್ರದೇಶದ ಸಮೀಪದಲ್ಲಿಯೇ 10ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಘಟಕಗಳನ್ನು ಸ್ಥಾಪಿಸದಿರುವುದರಿಂದ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿದೆ. ಮಳೆ ಬಂದಾಗ ಮಲೀನ ನೀರು ಕೆರೆ ಸೇರುತ್ತಿದೆ. ಇದರಿಂದಾಗಿ ಕೆರೆಯು ಮಲೀನವಾಗುತ್ತಿದೆ. ಜತೆಗೆ ಕೈಗಾರಿಕೆಗಳ ತ್ಯಾಜ್ಯ ನೀರು ಸಹ ಕೆರೆಗೆ ಹರಿಯುತ್ತಿರುವುದರಿಂದ ಕೆರೆ ಇನ್ನಷ್ಟು ಮಲೀನವಾಗಿದೆ.

ಪಾವಿತ್ರ್ಯತೆ ಉಳಿಸಲು ಒತ್ತಾಯ: ರಾಮಕೃಷ್ಣಾಪುರ ಕೆರೆಯ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳು ಹೆನ್ನಾಗರ ಮತ್ತು ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ಕೆರೆಗೆ ಹರಿಯುವುದನ್ನು ತಪ್ಪಿಸಬೇಕು. ಇದರಿಂದಾಗಿ ಕೆರೆಯ ಪಾವಿತ್ರ್ಯತೆ ಉಳಿಯುತ್ತದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಕೆರೆ ಏರಿಯ ಮೇಲೆ ತಡೆಗೋಡೆ ಸ್ಥಾಪಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಳೆದ ನವೆಂಬರ್‌ನಲ್ಲಿ ತ್ಯಾಜ್ಯ ನೀರು ಹರಿಯುವಿಕೆಯಿಂದಾಗಿ ನೂರಾರು ಮೀನುಗಳ ಮಾರಣ ಹೋಮವಾಗಿದೆ. ಇದರಿಂದಾಗಿ ಹೆನ್ನಾಗರ ಮತ್ತು ಮರಸೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಕೆರೆಯ ನೀರು ಮತ್ತು ತ್ಯಾಜ್ಯ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಯಾವುದೇ ಕ್ರಮಗಳನ್ನು ಜರುಗಿಸಲಿಲ್ಲ. ಕೆರೆಯಲ್ಲಿ ತ್ಯಾಜ್ಯ ನೀರು ಹರಿಯುವಿಕೆಯು ಕಡಿಮೆಯಾಗಿಲ್ಲ. ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳು ಕಡ್ಡಾಯವಾಗಿ ಎಸ್‌ಟಿಪಿ ಘಟಕಗಳನ್ನು ಸ್ಥಾಪಿಸಬೇಕು. ಘಟಕದಲ್ಲಿ ಸಂಸ್ಕರಿಸಿದ ನೀರು ಕೆರೆಗೆ ಹರಿಯುವಂತಾಗಬೇಕು. -ರವಿ ಗ್ರಾಮ ಪಂಚಾಯಿತಿ ಸದಸ್ಯ ಕೆರೆಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಪಂಚಾಯಿತಿ ವತಿಯಿಂದ ಕ್ರಮ ವಹಿಸಲಾಗುವುದು. ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು. -ರಾಮಸ್ವಾಮಿ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ಕೆರೆ ಸೇರುತ್ತಿರುವುದರಿಂದ ಹರಿಯುತ್ತಿರುವುದರಿಂದ ಅಂತರ್ಜಲ ಹಾಳಾಗುವ ಸಾಧ್ಯತೆಯಿದೆ. ನಿರಂತರವಾಗಿ ತ್ಯಾಜ್ಯ ಹರಿಯುವುದರಿಂದ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಕೆರೆಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು. -ಬಾಬು, ಸಾರ್ವಜನಿಕ ಕೆರೆಕಟ್ಟೆ ಸಂರಕ್ಷಣಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net