ಕ್ರೀಡೆಯತ್ತ ಗಮನಹರಿಸಿ

SPORTS
ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಗೆ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಭಾಸ್ಕರ್, ಡಾ.ಸೋಮಶೇಖರ್, ಡಾ.ಜಗದೀಶ ಪಾಟ್ನೆ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇತರರಿದ್ದರು.
Published on

ಹೊಸಪೇಟೆ:ವಿದ್ಯಾರ್ಥಿಗಳು ಕಲಿಕಾಭ್ಯಾಸದ ಜೊತೆಗೆ ಕ್ರೀಡೆಯತ್ತ ಗಮನ ಹರಿಸಿ ಬೌದ್ಧಿಕ ಮತ್ತು ದೈಹಿಕ ಸದೃಢತೆ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.

ಯುವಜನೋತ್ಸವ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ, ವಿಜಯನಗರ ಕಾಲೇಜು ಸಹಯೋಗದೊಂದಿಗೆ ಸೋಮವಾರ ಎಚ್‌ಐವಿ, ಏಡ್ಸ್ ನಿಯಂತ್ರಣ, ಜಾಗೃತಿಗಾಗಿ ಹಮ್ಮಿಕೊಂಡಿದ್ದ ಯುವಜನೋತ್ಸವ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಮೇಲೆ ಕಾಳಜಿ ಹಾಗೂ ಮಾರಕ ರೋಗಗಳ ಕುರಿತು ಜಾಗೃತಿ ಅವಶ್ಯವಾಗಿದೆ. ವಿದ್ಯಾರ್ಥಿಗಳು ಜಾಗೃತರಾಗುವುದರ ಜತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಮಾತನಾಡಿ, ಈ ಹಿಂದೆ ಹಿಂದುಳಿದ ರಾಷ್ಟ್ರಗಳಲ್ಲಿ ಎಚ್‌ಐವಿ ಹರಡುತ್ತದೆ ಎಂಬ ಕಳಂಕ ಇತ್ತು. ಹೆಚ್ಚಿನ ಜಾಗೃತಿ ಹಾಗೂ ನಿಯಂತ್ರಣ ಸಾಧನಗಳ ಬಳಕೆಯಿಂದ ರೋಗ ಹಂತಹಂತವಾಗಿ ಕಡಿಮೆಯಾಗುತ್ತಿದೆ ಎಂದರು.

ಬಳ್ಳಾರಿ-ವಿಜಯನಗರ ಜಿಲ್ಲೆಗಳ ವಿವಿಧ ತಾಲೂಕಿನ ವಿದ್ಯಾರ್ಥಿಗಳು ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಜಯನಗರ ಕಾಲೇಜು ಬಳಿಯಿಂದ ಆರಂಭಗೊಂಡ ಮ್ಯಾರಥಾನ್ ಮಾರ್ಕಂಡೇಶ್ವರ ದೇವಸ್ಥಾನ ರಸ್ತೆ, ವಾಲ್ಮೀಕಿ ವೃತ್ತ, ಮದಕರಿನಾಯಕ ವೃತ್ತ, ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಕನಕದಾಸ ವೃತ್ತ, ಚಿತ್ತವಾಡ್ಗಿ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಂದು ಪುನೀತ್ ರಾಜಕುಮಾರ್ ವೃತ್ತದ ಬಳಿ ಕೊನೆಗೊಂಡಿತು. 5 ಕಿಮೀ. ಮ್ಯಾರಥಾನ್‌ನಲ್ಲಿ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಹುಮಾನ ವಿತರಣೆ: 5 ಕಿಮೀ. ಮಾರ್ಗದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚನ್ನಕೇಶವ(ಪ್ರಥಮ), ತಿಪ್ಪೇಶ(ದ್ವಿತೀಯ) ಹಾಗೂ ವಿನಾಯಕ (ತೃತೀಯ) ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಸಂಗೀತ(ಪ್ರಥಮ), ಎನ್.ಪವಿತ್ರ(ದ್ವಿತೀಯ) ಹಾಗೂ ಸುಮಾ (ತೃತೀಯ) ಸ್ಥಾನ ಪಡೆದರು.

ಪ್ರಥಮ ಸ್ಥಾನ ಪಡೆದವರಿಗೆ 5 ಸಾವಿರ ರೂ., ದ್ವಿತೀಯ ಸ್ಥಾನ ಪಡೆದವರಿಗೆ 3.5 ಸಾವಿರ ರೂ. ಹಾಗೂ ತೃತೀಯ ಸ್ಥಾನಗಳಿಸಿದವರಿಗೆ 2 ಸಾವಿರ ರೂ. ಮತ್ತು ಪ್ರಮಾಣಪತ್ರ ನೀಡಲಾಯಿತು. ಸಮಾಧಾನಕರ ಬಹುಮಾನ ಪಡೆದ 7 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net