ಬೆಳಗಾವಿ ಬಿಟ್ಟರೆ ವಿಜಯಪುರದಲ್ಲಿಯೇ ಈ ಸೌಲಭ್ಯ, ಎಸ್‌ಎಎಸ್‌ಟಿಯಡಿ ಶಸ್ತ್ರ ಚಿಕಿತ್ಸೆಯ ಉಚಿತ ಸೇವೆ, ಎಲ್ಲಿ ಗೊತ್ತಾ?

COCHLIAR IMPLANT
ವಿಜಯಪುರ ನಗರದ ಬಿಎಲ್‌ಡಿಇ ವೈದ್ಯಕೀಯ ಕಾಲೇಜ್‌ನ ಸಭಾಂಗಣದಲ್ಲಿ ಉಪಕುಲಪತಿ ಡಾ.ಆರ್.ಎಸ್. ಮುಧೋಳ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಕುರಿತು ವಿವರಿಸಿದರು. ಡಾ.ಆರ್.ವಿ. ಕುಲಕರ್ಣಿ, ಡಾ.ಅರವಿಂದ ಪಾಟೀಲ, ಡಾ.ರಾಜೇಶ ಹೊನ್ನಟಗಿ, ಡಾ.ಎಚ್.ಟಿ. ನಾಗವೇಣಿ ಇದ್ದಾರೆ.
Published on

ವಿಜಯಪುರ: ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಟ್ರಸ್ಟ್ (ಎಸ್‌ಎಎಸ್‌ಟಿ) ಯೋಜನೆಯಡಿ ಬಿಎಲ್‌ಡಿಇ ಡೀಮ್ಡ್ ವಿವಿಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜ್‌ನಲ್ಲಿ ಇನ್ಮುಂದೆ ಕಿವುಡುತನ ಹೊಂದಿದ ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಯ ಸೇವೆ ಒದಗಿಸಲಾಗುವುದೆಂದು ಉಪಕುಲಪತಿ ಡಾ.ಆರ್.ಎಸ್. ಮುಧೋಳ ತಿಳಿಸಿದರು.

ರಕ್ತ ಸಂಬಂಧದಲ್ಲಿ ಮದುವೆಯಾವುದರಿಂದಾಗಿ ಹುಟ್ಟುವ ಮಕ್ಕಳಿಗೆ ಕೇಳಿಸುವಿಕೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಚಿಕಿತ್ಸೆ ಅವಶ್ಯಕ. ಅಲ್ಲದೇ, ಮಗು ಜನಿಸಿದ ಎರಡು ವರ್ಷದೊಳಗೆ ಸಮಸ್ಯೆ ಗುರುತಿಸಿ ಚಿಕಿತ್ಸೆ ಕೊಡಿಸಿದರೆ ಮಗು ಎಲ್ಲರಂತೆ ಜೀವಿಸಲು ಸಾಧ್ಯ. ಇದಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯು ಪ್ರಮುಖ ಪರಿಹಾರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ನಂತರ ವಿಜಯಪುರದಲ್ಲಿ ಈ ಶಸ್ತ್ರಚಿಕಿತ್ಸೆ ಲಭ್ಯವಾಗುತ್ತಿದೆ. ಈ ಭಾಗದ ಜನರಿಗೆ ಅಪರೂಪದ ಅವಕಾಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಹುಟ್ಟಿನಿಂದಲೇ ಆಳವಾದ ಕಿವುಡುತನವನ್ನು ಹೊಂದಿರುವ ಅಥವಾ ಮೆನಿಂಜೈಟಿಸ್‌ನಿಂದಾಗಿ ಕಿವುಡುತನ ಹೊಂದಿದ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. 8 ತಿಂಗಳಿಂದ 6 ವರ್ಷಗಳ ನಡುವಿನ ವಯಸ್ಸಿನ ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಜತೆಗೆ ಬಡನತನ ರೇಖೆಗಿಂತ ಕೆಳಗಿನ ಬಿಪಿಎಲ್ ಕಾರ್ಡ್ ಉಳ್ಳವರು ಈ ಲಾಭ ಪಡೆಯಬಹುದು. ಮುಂದಿನ ಒಂದು ತಿಂಗಳಲ್ಲಿ ಈ ಯೋಜನೆಯಡಿ ಮೊದಲ ಶಸ್ತ್ರಚಿಕಿತ್ಸೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಇದೇ ಶಸ್ತ್ರಚಿಕಿತ್ಸೆಯನ್ನು ಖಾಸಗಿಯಾಗಿ ನಡೆಸಿದರೆ 15 ಲಕ್ಷ ರೂಪಾಯಿಗಿಂತಲೂ ಅಧಿಕ ವೆಚ್ಚವಾಗುತ್ತದೆ. ಸರ್ಕಾರದ ಈ ಯೋಜನೆಯಡಿ 6 ಲಕ್ಷ ರೂಪಾಯಿ ಆಗುತ್ತದೆ. ಈ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಶಸ್ತ್ರಚಿಕಿತ್ಸೆಗಿಂತ ಕನಿಷ್ಠ ಒಂದು ತಿಂಗಳ ಮೊದಲು ಅಗತ್ಯವಿರುವ ಎಲ್ಲ ಸಾಮಾನ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಜತೆಗೆ ಎಲ್ಲ ದಾಖಲೆಗಳು ಕ್ರಮಬದ್ಧವಾಗಿದ್ದರೆ, ಸರ್ಕಾರಿ ಯೋಜನೆಯಡಿ ಅನುಮೋದನೆ ಪಡೆಯಲಾಗುತ್ತದೆ. ಅಲ್ಲದೇ, ಕಾಕ್ಲಿಯರ್ ಇಂಪ್ಲಾಂಟ್ (ಕಿವಿಯ ಯಂತ್ರ) ಸರ್ಕಾರದಿಂದಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಶಸ್ತ್ರಚಿಕಿತ್ಸೆಯ 10 ದಿನಗಳ ನಂತರ ಕಿವಿಯ ಯಂತ್ರವನ್ನು ಸ್ವಿಚ್ ಆನ್ ಮಾಡಲಾಗುತ್ತದೆ. ನಂತರ ಮಗುವನ್ನು ಆಡಿಟರಿ ಮೌಖಿಕ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಮಗುವಿಗೆ ಮಾತನ್ನು ಕೇಳಲು, ಗ್ರಹಿಸಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುವವರೆಗೆ ಕನಿಷ್ಠ ಒಂದು ವರ್ಷ ವೈದ್ಯರೋಡನೆ ಸಮಾಲೋಚನೆ ಅಗತ್ಯವಾಗುತ್ತದೆ. ಇದಕ್ಕೆ ತಕ್ಕ ಎಲ್ಲ ಸೌಲಭ್ಯಗಳು ನಮ್ಮಲ್ಲಿ ಲಭ್ಯವಿದ್ದು, ಇದು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ರಿಜಿಸ್ಟ್ರಾರ್ ಡಾ.ಆರ್.ವಿ. ಕುಲಕರ್ಣಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಪ್ರಧಾನ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನಟಗಿ, ಡಾ.ಎಚ್.ಟಿ. ನಾಗವೇಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net