ಜು.14ರಂದು ಅಪರೂಪ ಚಿತ್ರ ಬಿಡುಗಡೆ: ನಿರ್ದೇಶಕ ಮಹೇಶ್‌ಬಾಬು ಮಾಹಿತಿ

2
Published on

ಮಂಡ್ಯ: ತಾವು ನಿರ್ದೇಶಿಸಿರುವ 11ನೇ ಸಿನಿಮಾ ‘ಅಪರೂಪ’ ಜು.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಮಹೇಶ್‌ಬಾಬು ತಿಳಿಸಿದರು.

ವಿಭಿನ್ನ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದ ಮೂಲಕ ನಾಯಕರಾಗಿ ಸುಘೋಷ್ ಹಾಗೂ ನಾಯಕಿಯಾಗಿ ಋತಿಕಾ ಎಂಬ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಇಬ್ಬರಿಗೂ ಕನ್ನಡದಲ್ಲಿ ಇದು ಮೊದಲ ಚಿತ್ರ. ಕಥೆಗೆ ಪೂರಕವಾಗಿ ನಾಯಕ, ನಾಯಕಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪುನೀತ್‌ರಾಜ್‌ಕುಮಾರ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ದೊಡ್ಡ ನಟರನ್ನು ನಾಯಕರನ್ನಾಗಿಕೊಂಡು ಸಿನಿಮಾ ಮಾಡಿದ್ದೇನೆ. ಹಾಗೆಯೇ ಹೊಸಬರ ಜತೆಯೂ ಕೆಲಸ ಮಾಡಿದ್ದೇನೆ. ನನಗೆ ದೊಡ್ಡ ದೊಡ್ಡ ನಟ, ನಟಿಯರೇ ಬೇಕೆಂದೇನೂ ಇಲ್ಲ. ನಾಯಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಟಿಯರು ಇಂದು ದೊಡ್ಡ ನಾಯಕಿ ನಟಿಯರಾಗಿ ಬೆಳೆದಿದ್ದಾರೆ. ಇದು ತಮಗೆ ತೃಪ್ತಿ ತಂದಿದೆ. ಹೊಸ ಪ್ರತಿಭೆಗಳು ಬಂದಷ್ಟೂ ಇಂಡಸ್ಟಿಗೆ ಅನುಕೂಲ ಎಂದರು.

ಅಪರೂಪದ ನಟಿ ಋತಿಕಾ ಅವರು ಮೂಲತಃ ಕನ್ನಡತಿಯಾಗಿದ್ದು ಬಾಲನಟಿಯಾಗಿ ಗುರುತಿಸಿಕೊಂಡವರು. ಈಗಾಗಲೇ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 3.5 ಕೋಟಿ ರೂ ಬಜೆಟ್‌ನಲ್ಲಿ ಮದ್ದೂರಿನ ಕೆ.ಆರ್.ಮಹೇಶ್ ನಿರ್ಮಾಣದ ಈ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. 4 ಫೈಟ್‌ಗಳು, 5 ಹಾಡುಗಳಿವೆ. ಪುನೀತ್‌ರಾಜ್‌ಕುಮಾರ್ ಅವರು ಒಂದು ಹಾಡನ್ನು ಹಾಡಿದ್ದು, ಅದೇ ಅವರು ಹಾಡಿರುವ ಕೊನೆಯ ಹಾಡು ಎಂದರು.

ನಾಯಕ ನಟ ಸುಘೋಷ್, ನಾಯಕಿ ಋತಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net