ಕೋವಿಡ್ ಹಗರಣದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ: ಡಾ.ಕೆ.ಸುಧಾಕರ್

sudhakar
Published on

ಮೈಸೂರು: ಕೋವಿಡ್ ಸಮಯದಲ್ಲಿ ಹಗರಣ ನಡೆದಿರುವ ವಿಚಾರದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ ಎಂದು ಮಾಜಿ ಆರೋಗ್ಯ ಸಚಿವ, ಸಂಸದ ಡಾ.ಕೆ.ಸುಧಾಕರ್ ಹೇಳಿದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 16 ತಿಂಗಳಾಗಿದೆ. ಅದಕ್ಕೂ ಹಿಂದೆ ಬಿಜೆಪಿ ಸರ್ಕಾರ ಇತ್ತು. ಈ ವಿಷಯವಾಗಿ ಈಗ ಮಧ್ಯಂತರ ವರದಿ ತರಿಸಿಕೊಂಡಿದ್ದಾರೆ. ಅಂತಿಮ ವರದಿ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ, ನಾವು ಹೆದರಿಕೊಳ್ಳಲು ಯಾವುದೇ ವಿಷಯವನ್ನೂ ಬಚ್ಚಿಟ್ಟಿಲ್ಲ ಎಂದರು.


ಸರ್ಕಾರಗಳು ಸೈಕಲ್ ಇದ್ದ ಹಾಗೆ. ಚಕ್ರದಂತೆ ತಿರುಗುತ್ತೆ. ಹಿಂದೆ ನಮ್ಮ ಸರ್ಕಾರ ಇತ್ತು. ಈಗ ಕಾಂಗ್ರೆಸ್ ಸರ್ಕಾರ ಇದೆ. ನಾವು ಒಂದೇ ಒಂದು ಪ್ರಕರಣದಲ್ಲಿ ಈ ರೀತಿ ಮಾಡಿಲ್ಲ. ದ್ವೇಷದ ರಾಜಕಾರಣ ಮಾಡಿಲ್ಲ. ತನಿಖಾ ಅಸ್ತ್ರ ಇಟ್ಟುಕೊಂಡು ಬೆದರಿಸುವ ಕೆಲಸ ಮಾಡಲಿಲ್ಲ. ಕುರ್ಚಿ ಇರುವವರೆಗೆ ಮಾಡುತ್ತಾರೆ. ಮುಂದೆ ಇನ್ನೊಬ್ಬರು ಬರುತ್ತಾರೆ. ಅವರಿಗೆ ದ್ವೇಷದ ರಾಜಕಾರಣ ಮಾಡುವುದು ಗೊತ್ತಿಲ್ಲವೇ? ದ್ವೇಷದ ರಾಜಕಾರಣ ಕಲಿಸಿ ಕೊಡುತ್ತಿದ್ದಾರೆ. ನಾವು ಕಲಿತುಕೊಳ್ಳುತ್ತೇವೆ ಎಂದು ಹೇಳಿದರು.


ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಆದರೆ, ಆದಾಯ ತೆರಿಗೆ ಇಲಾಖೆ(ಐಟಿ) ಬಿಜೆಪಿ ಸರ್ಕಾರ ಬಂದ ಮೇಲೆ ಬಂತಾ? ಹಿಂದೆ ಎಷ್ಟು ಜನರನ್ನು ಇವರು ಜೈಲಿಗೆ ಕಳುಹಿಸಿದ್ದಾರೆ. ಜನಾರ್ದನ ರೆಡ್ಡಿಯನ್ನು ಜೈಲಿಗೆ ಕಳುಹಿಸಿದವರು ಯಾರು? ಅವರಿದ್ದಾಗ ಸಿಬಿಐ, ಐಟಿ ಪವಿತ್ರ ಸಂಸ್ಥೆ, ಈಗ ವರ್ಸ್ಟ್ ಆಗಿವೆಯೇ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಬಿಜೆಪಿ ನಾಯಕರ ಹೇಳಿಕೆಗಳೇ ಗಣೇಶ ವಿಸರ್ಜನೆ ವೇಳೆ ನಡೆದಿರುವ ಗಲಾಟೆಗೆ ಕಾರಣ ಎಂದು ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ಸಮುದಾಯವನ್ನು ಓಲೈಕೆ ಮಾಡುವ ರಾಜಕಾರಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಆ ಪಕ್ಷದ ಡಿಎನ್‌ಎಯಲ್ಲೇ ಅದು ಇದೆ ಎಂದು ಕುಟುಕಿದರು.


ಗಣೇಶ ವಿಸರ್ಜನೆಗೆ ಕಾಂಗ್ರೆಸ್ ಸರ್ಕಾರ ತಡೆಯೊಡ್ಡಿದೆ. ನಾವು ಬೇರೆ ದೇಶದಲ್ಲಿ ಗಣೇಶ ಹಬ್ಬ ಮಾಡುತ್ತಿದ್ದೇವೆಯೇ ಅಂತ ಅನಿಸಿದೆ. ಈ ಬಗ್ಗೆ ಅನೇಕರು ನೋವು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಏಕೆ ಈ ರೀತಿ ಮಾಡುತ್ತಿದ್ದಾರೆಂದು ವಿಮರ್ಶೆ ಮಾಡಿಕೊಳ್ಳಲಿ. ಬಹುಸಂಖ್ಯಾತ ಹಿಂದುಗಳಿರುವ ದೇಶದಲ್ಲಿ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಪೊಲೀಸ್ ವಾಹನದಲ್ಲಿ ಗಣೇಶನ ವಿಗ್ರಹ ಇಟ್ಟುಕೊಂಡಿದ್ದಾರೆ. ಈ ರೀತಿ ಯಾವಾಗಲಾದರೂ ಆಗಿದೆಯೇ? ಎಂದು ಪ್ರಶ್ನಿಸಿದರು.


ಶಾಸಕ ಮುನಿರತ್ನ ವಿರುದ್ಧ ಪ್ರಕರಣ ಏನು ಅಂತ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ. ‘ಮುನಿರತ್ನ ಅವರೊಂದಿಗೆ ಓಡಾಡಿದವರಿಗೆ ಎಚ್‌ಐವಿ ಸೋಂಕು ತಗಲಿದೆ’ ಎಂದು ಶಾಸಕ ಡಾ.ರಂಗನಾಥ್ ಹೇಳಿಕೆಯಂತಹ ವೈಯುಕ್ತಿಕ ವಿಚಾರ ಮಾತನಾಡುವುದಿಲ್ಲ. ಆ ಆರೋಪ ದೃಢವಾಗಬೇಕು. ದೃಢವಾದ ಮೇಲೆ, ಅಂತಿಮ ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net