ಸಚಿವ ಸಂತೋಷ ಲಾಡ್ ಹೇಳಿಕೆ; ಕಾಂಗ್ರೆಸ್‌ಗೆ ಯಾರಾದರೂ ಬರಬಹುದು

29 Dwd 1 Santosh Lad
Published on

ಧಾರವಾಡ: ಕಾಂಗ್ರೆಸ್ ಪ್ರಜಾಪ್ರಭುತ್ವದ ದೊಡ್ಡ ಪಕ್ಷ. ನಮ್ಮ ಪಕ್ಷಕ್ಕೆ ಯಾರಾದರೂ ಬರಬಹುದು. ಎರಡೂ ಕಡೆ ಬಾಗಿಲು ಇರುವ ಬಸ್‌ನಂತೆ ನಮ್ಮ ಪಕ್ಷ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಎಸ್.ಐ. ಚಿಕ್ಕನಗೌಡರ ಕಾಂಗ್ರೆಸ್ ಬರಬಹುದು ಎಂಬ ಮಾಹಿತಿ ಇದೆ ಎಂದು ಹೇಳಿದ್ದೆ. ಅವರಿಬ್ಬರೂ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳಿಲ್ಲ. ಕೆಲವರು ಸ್ವಪ್ರೇರಣೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳುತ್ತಿದ್ದಾರೆ. ಯಾರು ಆಸಕ್ತರಿದ್ದಾರೋ ಅವರನ್ನು ಸ್ವಾಗತಿಸುತ್ತೇವೆ. ನಾವು ಶಾಸಕರನ್ನು ಕಾಯ್ದಿರಿಸಿಕೊಳ್ಳುತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೂ ರಿಸರ್ವ್ ಇಲ್ಲ ಎಂದರು.
ಬಿಜೆಪಿಯ ಶಾಸಕರು, ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಅಭಿವೃದ್ಧಿ ಕೆಲಸಗಳಿಗಾಗಿ ಭೇಟಿಯಾಗುತ್ತಾರೆ. ರಾಜಕೀಯ ಅಜೆಂಡಾ ಸಹ ಇರಬಹುದು. ಯಾರು ಭೇಟಿಯಾಗಿದ್ದಾರೋ ಅವರನ್ನೇ ಭೇಟಿಯ ಉದ್ದೇಶವನ್ನು ಕೇಳಬೇಕು ಎಂದರು.
ಗೃಹಲಕ್ಷ್ಮೀ ಕಾರ್ಯಕ್ರಮ ಪರ ಸೋಮಶೇಖರ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸರ್ಕಾರದ ಕಾರ್ಯಕ್ರಮ. ಹೀಗಾಗಿ ಬಿಜೆಪಿಯವರೂ ಕೈ ಜೋಡಿಸಬಹುದು. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net