ಬಾಂಗ್ಲಾ ಕ್ಷಿಪ್ರ ಕ್ರಾಂತಿಯಿಂದ ಕೊಡಗಿನಲ್ಲಿ ಆತಂಕ

Anxiety in Kodagu due to rapid revolution in Bangladesh
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಪಕ್ಕದ ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರಕ್ರಾಂತಿ ಮತ್ತು ನಂತರದ ಬೆಳವಣಿಗೆಗಳ ಬೆನ್ನಲ್ಲೇ ಕೊಡಗಿನಲ್ಲೂ ಆತಂಕ ಕಾಣಿಸಿಕೊಂಡಿದೆ. ಅಸ್ಸಾಂ ಮೂಲದವರು ಎಂದುಕೊಂಡು ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕರ ಸಂಖ್ಯೆ ಕಳೆದ ಒಂದು ವಾರದಿಂದ ಈಚೆಗೆ ಹೆಚ್ಚಾಗುತ್ತಿದ್ದು, ಇವರುಗಳ ನೈಜ ದಾಖಲೆ ಪರಿಶೀಲಿಸುವ ಕೆಲಸ ಆಗಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಅಸ್ಸಾಂನವರ ಸೋಗಿನಲ್ಲಿ ಈಗಾಗಲೇ ಕೊಡಗಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾ ದೇಶೀಯರು ಅಲ್ಲಲ್ಲಿ ನೆಲೆಸಿದ್ದು, ಯಾವತ್ತಿದ್ದರೂ ಇವರುಗಳು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ನಾಪೋಕ್ಲು ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಒಂದು ಸುತ್ತು ಹಾಕಿದರೆ ಸ್ಥಳೀಯವಲ್ಲದ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದು ಸಾಮಾನ್ಯ. ತಾವು ಅಸ್ಸಾಂ ಮೂಲದವರು ಎಂದು ಹೇಳಿಕೊಳ್ಳುವ ಇವರುಗಳು ಜಿಲ್ಲೆಯಾದ್ಯಂತ ಬಹು ವೇಗವಾಗಿ ವ್ಯಾಪಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸ್ಥಳೀಯರಿಗೆ ಇವರುಗಳ ಅವಲಂಬನೆ ಅನಿವಾರ್ಯ ಎನ್ನುವಂತೆ ಆಗಿಬಿಟ್ಟಿದೆ.

ಈ ’ಅಸ್ಸಾಮಿಗರು’ ಈಗ ಕೇವಲ ಕಾಫಿ ತೋಟದ ಕಾರ್ಮಿಕರಾಗಿ ಮಾತ್ರ ಉಳಿದುಕೊಂಡಿಲ್ಲ. ಕಾಫಿ ತೋಟದಿಂದ ಆಚೆಗೂ ದುಡಿಮೆ ಆರಂಭಿಸಿದ್ದಾರೆ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ರೂಂ ಬಾಯ್ ತನಕವೂ ತಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ಪೇಂಟಿಂಗ್, ಗಾರೆ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೊಟೇಲ್‌ಗಳಲ್ಲಿ ಬಾಣಸಿಗರರಾಗಿ, ಸಪ್ಲೈರ್‌ಗಳಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಜಿಲ್ಲೆಯಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಲ್ಲೂ ಇಂಥ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಇತರ ಹೊರ ರಾಜ್ಯದ ಕಾರ್ಮಿಕರೂ ಅಲ್ಲಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ’ಅಸ್ಸಾಮಿಗರ’ ಏಕಸ್ವಾಮ್ಯತೆ ಎಲ್ಲಾ ಕಡೆಗಳಲ್ಲಿ ಕಂಡು ಬರುತ್ತಿದೆ. ಹೊರ ರಾಜ್ಯದ ಕಾರ್ಮಿಕರ ಪೈಕಿ ಅಸ್ಸಾಂ ಮೂಲದವರೇ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲಸ ಕೊಟ್ಟ ಕಾಫಿ ಬೆಳೆಗಾರರ ಮೇಲೆಯೇ ಹಲ್ಲೆ ನಡೆಸಿರುವ ಘಟನೆಗಳು ಜಿಲ್ಲೆಯ ಹಲವೆಡೆ ಆಗಾಗ್ಗೆ ನಡೆಯುತ್ತಿರುತ್ತದೆ. ಅಕ್ರಮ ಗೋಮಾಂಸ ಮಾರಾಟ, ಕಳುವು, ದರೋಡೆ, ಮಾದಕ ವಸ್ತುಗಳ ಮಾರಾಟ, ಅತ್ಯಾಚಾರ, ಹೊಡೆದಾಟದಂತಹ ಪ್ರಕರಣಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಆರೋಪಿಗಳಾಗಿರುವುದೂ ಇದೆ.

ಪೊಲೀಸ್ ಮೂಲಗಳ ಪ್ರಕಾರ ಅಸ್ಸಾಂ ಮೂಲದ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಮುಂದೊಂದು ದಿನ ಅಕ್ರಮ ವಲಸಿಗರಿಂದ ಕಾನೂನು, ಸುವ್ಯವಸ್ಥೆಗೆ ದೊಡ್ಡ ಅಡ್ಡಿ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ’ಇವರು ಅಸ್ಸಾಮಿಗರಲ್ಲ.. ಬಾಂಗ್ಲಾದ ಅಕ್ರಮ ವಲಸಿಗರು,’ ಎನ್ನುವ ಮಾತುಗಳು ಅಸ್ಸಾಂ ಕಾರ್ಮಿಕರ ಬಗ್ಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಆದರೆ ಬಹುತೇಕ ಕಾರ್ಮಿಕರ ಬಳಿ ಅಸ್ಸಾಂ ವಿಳಾಸದ ಆಧಾರ್ ಕಾರ್ಡ್‌ಗಳಿವೆ. ೨ ವರ್ಷಗಳ ಹಿಂದೆ ಪೊಲೀಸ್ ಇಲಾಖೆ ವತಿಯಿಂದ ತಪಾಸಣೆ ನಡೆಸಿದ ಸಂದರ್ಭ ಅವರ ಬಳಿ ಭಾರತೀಯ ದಾಖಲೆಗಳು ಕಂಡುಬಂದಿದ್ದು, ಅಕ್ರಮವಾಗಿ ಇಂಥ ದಾಖಲೆಗಳು ಮಾಡಿಸಿಕೊಂಡಿರುವ ಆರೋಪಗಳೂ ಇದೆ. ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಸ್ಥಳೀಯವಾಗಿ ಅಗತ್ಯವಿರುವ ದಾಖಲೆಗಳನ್ನು ಮಾಡಿಕೊಡುವ ದೊಡ್ಡ ಜಾಲ ಇರುವ ಶಂಕೆಯೂ ವ್ಯಕ್ತವಾಗುತ್ತಿದೆ.

ಪಕ್ಕದ ಬಾಂಗ್ಲಾ ದೇಶದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿ ಮತ್ತು ನಂತರ ನಡೆಯುತ್ತಿರುವ ಬೆಳವಣಿಗೆಗಳು ಕೊಡಗಿನಲ್ಲೂ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಇರುವ ಅಸ್ಸಾಂ ಕಾರ್ಮಿಕರ ಪೈಕಿ ಹೆಚ್ಚಿನವರು ಬಾಂಗ್ಲಾ ದೇಶೀಯರೂ ಇದ್ದು ಇವರನ್ನು ಈಗಲೇ ನಿಯಂತ್ರಿಸದಿದ್ದರೆ ಇಲ್ಲಿಯು ಮಗ್ಗುಲ ಮುಳ್ಳಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಕಳೆದ ಒಂದು ವಾರದಿಂದ ಈಚೆಗೆ ದೊಡ್ಡ ಸಂಖ್ಯೆಯಲ್ಲಿ ’ಅಸ್ಸಾಂ’ ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದು, ಇವರ ಮೂಲದ ಬಗ್ಗೆ ಸರಿಯಾದ ತಪಾಸಣೆ ಆಗಬೇಕಿದೆ ಎಂದು ವಿಜಯವಾಣಿ ಓದುಗರು ಪತ್ರಿಕೆಯೊಂದಿಗೆ ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಕೊಡಗಿಗೆ ಆಗಮಿಸುವ ವಲಸೆ ಕಾರ್ಮಿಕರು ಕೂಡಲೇ ಜಿಲ್ಲೆಯಾದ್ಯಂತ ಚದುರಿ ಹೋಗುತ್ತಿದ್ದಾರೆ. ಇವರನ್ನು ಇಲ್ಲಿ ಬರಮಾಡಿಕೊಂಡು ಸೂಕ್ತ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸುವ ದಲ್ಲಾಳಿಗಳೂ ಅಲ್ಲಲ್ಲಿ ಇರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ. ಈ ರೀತಿಯ ವಲಸೆ ಕಾರ್ಮಿಕರ ಸಂಖ್ಯೆ ದೊಡ್ಡದಿರುವುದರಿಂದ ಕಟ್ಟುನಿಟ್ಟಿನ ನಿಗಾ ವಹಿಸಲು ಪೊಲೀಸರಿಗೂ ಕಷ್ಟವಾಗುತ್ತಿದೆ. ಹಾಗಾಗಿ ದೇಶದ ಹಿತದೃಷ್ಟಿಯಿಂದ ತೋಟದ ಮಾಲೀಕರೇ ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿಕೊಂಡು ತಮ್ಮಲ್ಲಿಗೆ ಬರುವ ವಲಸೆ ಕಾರ್ಮಿಕರ ಪೂರ್ವಾಪರಗಳನ್ನು ತಿಳಿದುಕೊಂಡು ಅನುಮಾನಾಸ್ಪದವಾಗಿ ಕಂಡು ಬಂದರೆ ತಮಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಅಸ್ಸಾಂ ಮೂಲದವರು ಎಂದು ಹೇಳಿಕೊಳ್ಳುವ ಹಲವಾರು ಬಾಂಗ್ಲದೇಶೀಯರು ಕೊಡಗಿನ ಕಾಫಿ ತೋಟಗಳಲ್ಲಿ, ಹೊಟೇಲ್‌ಗಳಲ್ಲಿ ಗಣಿಗಾರಿಕೆ ಸೇರಿದಂತೆ ಹಲವು ಕಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿ ಅರಾಜಕತೆ ಶುರುವಾಗಿರುವುದರಿಂದ ನುಸುಳುಕೋರರು ಭಾರತಕ್ಕೆ ಬರಬಹುದು. ಭಾರತೀಯ ಸೇನೆ, ಬಿಎಸ್‌ಎಫ್ ಈಗಾಗಲೇ ಗಡಿ ಬಂದ್ ಮಾಡಿದೆ. ಆದರೂ ಅಪರಾಧ ಹಿನ್ನೆಲೆ ಇರುವವರು, ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಭಾರತದೊಳಕ್ಕೆ ನುಸುಳಬಹುದು. ತೋಟದಲ್ಲಿ, ಉದ್ಯಮಗಳಲ್ಲಿ ಬಾಂಗ್ಲಾದೇಶೀಯರು ಇದ್ದರೆ ಆಧಾರ್, ಓಟರ್ ಐಡಿ ಸೇರಿದಂತೆ ಅವರ ದಾಖಲೆಗಳನ್ನು ತೆಗೆದುಕೊಳ್ಳಬೇಕು, ಫೋಟೋ ತೆಗೆದಿಟ್ಟುಕೊಳ್ಳಬೇಕು. ಇದನ್ನು ಹತ್ತಿರದ ಪೊಲೀಸ್ ಠಾಣೆಗೆ ಕೊಡುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು.
ಪ್ರತೀಕ್ ಪೊನ್ನಣ್ಣ, ಸಾಮಾಜಿಕ ಕಾರ್ಯಕರ್ತ, ಮಡಿಕೇರಿ

ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಕೂಲಿ ಕೆಲಸಕ್ಕಾಗಿ ಬರುವ ಜನರ ಕುರಿತು ಅಪರಾಧಿಕ ಹಿನ್ನೆಲೆಯನ್ನು ಪರಿಶೀಲಿಸಿಕೊಳ್ಳಬೇಕು. ಕೂಲಿ ಕೆಲಸಕ್ಕೆ ಸೇರಿಕೊಂಡಿರುವ ಜನರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ ೧೧೨ ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಬಾಂಗ್ಲಾ ದೇಶದಲ್ಲಿನ ಬೆಳವಣಿಗೆ ನಂತರ ನಮ್ಮ ಇಲಾಖೆಯೂ ವಲಸೆ ಕಾರ್ಮಿಕರ ಮೇಲೆ ತೀವ್ರಾ ನಿಗಾ ಇಟ್ಟಿದೆ. ತಮ್ಮಲ್ಲಿಗೆ ಹೊಸಬರು ಯಾರಾದರೂ ಬಂದರೆ ತೋಟದ ಮಾಲೀಕರು ಪೊಲೀಸ್ ಇಲಾಖೆಗೆ ಮಾಹಿತಿ ಕೊಡಬೇಕು.
ಕೆ. ರಾಮರಾಜನ್, ಕೊಡಗು ಎಸ್.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net