ಎದುರಾಯ್ತು ಹಕ್ಕಿಜ್ವರ ಆತಂಕ!

17 MAHESH 1
Published on

ಕಿರಣ್ ಮಾದರಹಳ್ಳಿ ಚಾಮರಾಜನಗರ
ನೆರೆಯ ಜಿಲ್ಲೆ ಮೈಸೂರಿನಲ್ಲಿ ಹಕ್ಕಿಜ್ವರ ದೃಢವಾಗುತ್ತಿದ್ದಂತೆ ಚಾಮರಾಜನಗರದಲ್ಲೂ ಆತಂಕ ಶುರುವಾಗಿದ್ದು, ಕರೊನಾ ವೈರಸ್ ಭೀತಿಯಲ್ಲಿರುವ ಸಾರ್ವಜನಿಕರ ದುಗುಡ ಮತ್ತಷ್ಟು ಅಧಿಕಗೊಂಡಿದೆ.

ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಮನೆಯೊಂದರಲ್ಲಿ ಸಾಕಿದ್ದ ಕೋಳಿ ಮತ್ತು ಸಮೀಪದ ಪ್ರದೇಶದಲ್ಲೇ ಸತ್ತು ಬಿದ್ದಿದ್ದ ಕೊಕ್ಕರೆಗೆ ಹಕ್ಕಿಜ್ವರ ರೋಗಾಣು ಪತ್ತೆಯಾಗಿರುವುದು ದೃಢಪಟ್ಟಿದೆ. ಕೇರಳದ ಕೋಜಿಕೋಡ್‌ನಲ್ಲೂ ಹಕ್ಕಿಜ್ವರ ಬಾಧಿಸುತ್ತಿದೆ. ಇವೆರಡರ ನಡುವೆ ಇರುವ ಗಡಿಜಿಲ್ಲೆ ಚಾಮರಾಜನಗರಕ್ಕೆ ಹಕ್ಕಿಜ್ವರ ಹರಡಬಹುದೆಂಬ ಭಯ ನಾಗರಿಕರಲ್ಲಿ ಮನೆ ಮಾಡಿದೆ.

ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ತಮಿಳುನಾಡಿನಿಂದ ಕರ್ನಾಟಕ ಮತ್ತು ಹೊರರಾಜ್ಯಕ್ಕೆ ಕೋಳಿ ಮತ್ತು ಇದರ ಉತ್ಪನ್ನಗಳು ಸಾಗಣೆಯಾಗುತ್ತಿರುವುದರಿಂದ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಹಕ್ಕಿಜ್ವರ ಬಾರದಂತೆ ಪಶುಸಂಗೋಪನಾ ಇಲಾಖೆ ಕ್ರಮ ವಹಿಸಿರುವುದು ಜಿಲ್ಲೆಯಲ್ಲಿ ಈವರೆಗೂ ಹಕ್ಕಿಜ್ವರ ಕಾಣಿಸಿಕೊಳ್ಳದಿರಲು ಸಹಕಾರಿಯಾಗಿದೆ.


ವಲಸೆ ಹಕ್ಕಿಗಳಿಂದ ರೋಗ ಬರಬಹುದು: ಕೋಳಿ ಸಾಕಣೆ ಮತ್ತು ಸಾಗಣೆಯಲ್ಲಿ ಕಟ್ಟೆಚ್ಚರ ವಹಿಸಿರುವುದರಿಂದ ಹಕ್ಕಿಜ್ವರ ಜಿಲ್ಲೆಗೆ ಕಾಲಿಡಲು ಸಾಧ್ಯವಿಲ್ಲವಾದರೂ ವಲಸೆ ಹಕ್ಕಿಗಳು ರೋಗವನ್ನು ಹೊತ್ತು ತರುವ ಸಾಧ್ಯತೆಯಿದೆ.
ದಟ್ಟಾರಣ್ಯ ಪ್ರದೇಶವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ವನ್ಯಮೃಗಗಳ ಜತೆ ಪಕ್ಷಿ ಸಂಕುಲವೂ ವಾಸ ಮಾಡುತ್ತಿವೆ. ಜಿಲ್ಲಾ ಪಶುಸಂಗೋಪನಾ ಇಲಾಖೆ ನಡೆಸಿದ 19ನೇ ಜಾನುವಾರು ಗಣತಿ ಪ್ರಕಾರ ಚಾಮರಾಜನಗರದಲ್ಲಿ 59,029, ಗುಂಡ್ಲುಪೇಟೆ-25,161, ಕೊಳ್ಳೇಗಾಲ-56,823, ಯಳಂದೂರು-15,696 ಸೇರಿ ಒಟ್ಟು 1,56,709 ಕೋಳಿಗಳು ಪತ್ತೆಯಾಗಿವೆ. ಇನ್ನು ಬಾಯ್ಲರ್ ಕೋಳಿಗಳ ಸಾಕಣಿಕೆ ಘಟಕಗಳು ಜಿಲ್ಲೆಯಲ್ಲಿವೆ. ಇವುಗಳ ಮೇಲೆ ಹಕ್ಕಿಜ್ವರ (ಎಚ್5ಎನ್1) ರೋಗಾಣು ದಾಳಿ ಮಾಡದಿರಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ರೋಗಾಣು ಕಾಣಿಸಿಕೊಂಡ 1 ಕಿ.ಮೀ ವ್ಯಾಪ್ತಿಯಲ್ಲಿರುವ ಹಕ್ಕಿಗಳನ್ನು ಸಾಯಿಸಿ ಮಣ್ಣಿನಲ್ಲಿ ಹೂಳುವುದು ಮತ್ತು 10 ಕಿ.ಮೀ ವ್ಯಾಪ್ತಿಯಲ್ಲಿರುವ ಕೋಳಿ ಾರಂಗಳ ಮೇಲೆ ನಿಗಾ ವಹಿಸುವುದು. ಅಸ್ವಾಭಾವಿಕವಾಗಿ ಸಾವಿಗೀಡಾದ ಕೋಳಿಗಳನ್ನು ಪರೀಕ್ಷೆಗೊಳಪಡಿಸಿ ರೋಗಾಣು ಪತ್ತೆ ಮಾಡುವ ವಿಧಾನ ಜಾರಿಯಲ್ಲಿದೆ.

ಜಿಲ್ಲೆಯಲ್ಲಿ ಈವರೆಗೂ ಅಸ್ವಾಭಾವಿಕವಾಗಿ ಸಾವಿಗೀಡಾದ ಹಕ್ಕಿಗಳು ಪತ್ತೆಯಾಗಿಲ್ಲ. ಕೇರಳದ ಕೋಜಿಕೋಡ್‌ನಲ್ಲಿ ಸೋಂಕು ಪತ್ತೆಯಾಗಿರುವುದನ್ನು ಗಮದಲ್ಲಿಟ್ಟುಕೊಂಡು ಜಿಲ್ಲಾಡಳಿತ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಲಸೆ ಹಕ್ಕಿಗಳ ಮೇಲೂ ನಿಗಾವಹಿಸಬೇಕಾಗಿದೆ.

ಮಾಂಸ ಮಾರಾಟದ ಮೇಲೆ ಕರಿನೆರಳು: ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಕೋಳಿ ಮಾಂಸ ಸೇವನೆಯಿಂದ ಕರೊನಾ ವೈರಸ್ ಹರಡಲಿದೆ ಎಂದು ಹಬ್ಬಿಸಿದ ವದಂತಿಯಿಂದಾಗಿ ಕುಸಿದಿದ್ದ ಕೋಳಿಮಾಂಸ ಮಾರಾಟಕ್ಕೆ ಇದೀಗ ಹಕ್ಕಿಜ್ವರ ಸರಿಯಾದ ಹೊಡೆತ ಕೊಟ್ಟಿದೆ.
ಕಳೆದ ಒಂದು ವಾರದಿಂದ ಗ್ರಾಹಕರಿಲ್ಲದೆ ಬಣಗುಡುತ್ತಿರುವ ಕೋಳಿ ಮಾಂಸ ಮಾರಾಟದ ಅಂಗಡಿಗಳು ಕೇರಳ ನಂತರ ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ವಿಷಯ ತಿಳಿದು ವ್ಯಾಪಾರದಲ್ಲಿ ಮತ್ತಷ್ಟು ನಷ್ಟ ಎದುರಾಗಲಿದೆ ಎಂದು ಚಿಂತೆಗೀಡಾಗಿದ್ದರು. ಜಿಲ್ಲೆಯಲ್ಲಿ ಕೋಳಿ ಾರಂಗಳ ಸಂಖ್ಯೆ ಹೆಚ್ಚಾಗಿದೆ. ನೆರೆ ರಾಜ್ಯ ಮತ್ತು ಜಿಲ್ಲೆಗಳಿಂದ ಕೋಳಿ ಆಮದು ಆಗುವುದಕ್ಕಿಂತ ಇಲ್ಲಿಂದಲೇ ಬೇರೆ ಕಡೆಗಳಿಗೆ ಕೋಳಿ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾದ ಸಂದರ್ಭಗಳಲ್ಲಿ ಮಾತ್ರ ಹೊರಗಿನಿಂದ ಕೋಳಿಗಳನ್ನು ತರಿಸಿಕೊಳ್ಳಲಾಗುತ್ತದೆ. ಅದಾಗ್ಯೂ ಜಿಲ್ಲೆಯ ಜನರು ಕೋಳಿ ಮಾಂಸ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಮನುಷ್ಯರಿಗೆ ಹಕ್ಕಿಜ್ವರ ತಗುಲುವ ಸಾಧ್ಯತೆ ಕಡಿಮೆ ಇದ್ದರೂ ಜನರು ಮುಂಜಾಗ್ರತೆ ಕ್ರಮವಾಗಿ ಮಾಂಸಾಹಾರ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ.


ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ತಕ್ಷಣ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರಿನಲ್ಲಿ ರೋಗಾಣು ಪತ್ತೆಯಾಗಿರುವುದರಿಂದ ಹೆಚ್ಚಿನ ಜಾಗೃತೆ ವಹಿಸಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿ ಹೊರಗಿನಿಂದ ತರುವಂತಹ ಕೋಳಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಲಸೆ ಹಕ್ಕಿಗಳ ಅಸ್ವಾಭಾವಿಕ ಸಾವಿನ ಪ್ರಕರಣಗಳು ಈವರೆಗೂ ವರದಿಯಾಗಿಲ್ಲ.
ವೀರಭದ್ರಯ್ಯ, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net