ನರಗುಂದ ಬಸ್ ನಿಲ್ದಾಣದಲ್ಲಿ ಆತಂಕ

24 NRD 8
Published on

ನರಗುಂದ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ವಿದ್ಯುತ್ ಮೀಟರ್ ಬೋರ್ಡ್‌ಗಳಲ್ಲಿ ಶುಕ್ರವಾರ ಸಂಜೆ ಏಕಾಏಕಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಯಾಗಿತ್ತು.

ಬಸ್ ನಿಲ್ದಾಣದ ಕ್ಯಾಂಟೀನ್‌ನ ಹಿಂಬದಿಯ ಪ್ರತ್ಯೇಕ ಕೊಠಡಿಯಲ್ಲಿ ಅಳವಡಿಸಿದ್ದ 20ಕ್ಕೂ ಅಧಿಕ ಮೀಟರ್ ಬೋರ್ಡ್‌ಗಳು ಸುಟ್ಟು ಕರಕಲಾಗಿವೆ. ಪಟಾಕಿಗಳ ಸದ್ದಿನಂತೆ ಮೀಟರ್ ಬೋರ್ಡ್‌ಗಳು ಸುಡುತ್ತಿರುವ ಶಬ್ದವನ್ನು ಕೇಳಿದ ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದೆ. ಇಲ್ಲಿರುವ ಮಳಿಗೆಗಳಲ್ಲಿ ಬಹುತೇಕ ಎಗ್‌ರೈಸ್, ಚಹಾ ಅಂಗಡಿಗಳನ್ನು ನಡೆಸುವವರಿದ್ದಾರೆ. ಅವರೆಲ್ಲ ಸಿಲಿಂಡರ್ ಬಳಸುತ್ತಿದ್ದಾರೆ. ನಿಲ್ದಾಣದ ಆವರಣ ಬಳಿ ನೂರಾರು ಬೈಕ್, ಕಾರುಗಳನ್ನು ನಿಲ್ಲಿಸಲಾಗುತ್ತದೆ. ನಿಲ್ದಾಣದೊಳಗೆ ಹತ್ತಾರು ಬಸ್ ಹಾಗೂ ಸಾವಿರಾರು ಪ್ರಯಾಣಿಕರಿರುತ್ತಾರೆ. ಆದರೆ, ಬೆಂಕಿಯ ಕೆನ್ನಾಲಿಗೆ ವಿಸ್ತರಿಸಿಕೊಳ್ಳುವ ಮುನ್ನವೇ ಸಾರ್ವಜನಿಕರ ಸಮಯ ಪ್ರಜ್ಞೆ ಮೆರೆದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಬೈಕ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಕೆಲಕಾಲ ನಗರದ ಸಂಪೂರ್ಣ ವಿದ್ಯುತ್ ಕಡಿತಗೊಳಿಸಿ ಅಗ್ನಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net