ಆನ್ವರಿಗಷ್ಟೇ ಪಿಯು ಕಾಲೇಜು ಮಂಜೂರು, ಗೌಡೂರಿಗಿಲ್ಲ ಅವಕಾಶ

Anwari Gaudur School
ಗೌಡೂರು ಗ್ರಾಮದ ಪ್ರೌಢಶಾಲೆ ಹೊರನೋಟ. ಆನ್ವರಿ ಗ್ರಾಮದ ಪ್ರೌಢಶಾಲೆ ಹೊರನೋಟ.
Published on

ಹಟ್ಟಿಚಿನ್ನದಗಣಿ: ಆನ್ವರಿ ಹಾಗೂ ಗೌಡೂರು ಗ್ರಾಮಗಳ ಪೈಕಿ ಆನ್ವರಿಯಲ್ಲಷ್ಟೇ ಪಿಯು ಕಾಲೇಜು ಆರಂಭಿಸಲು ಸರ್ಕಾರ ಅಸ್ತು ಎಂದಿದೆ. ಗೌಡೂರಿಗೆ ಕಾಲೇಜು ಮಂಜೂರಾಗದಿರುವುದು ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ನಿರಾಸೆ ಮೂಡಿಸಿದೆ.

ಆನ್ವರಿಯಲ್ಲಿ ಕಾಲೇಜು ಆರಂಭಿಸಬೇಕೆಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಹಾಗೂ ಜಿಪಂ ಸದಸ್ಯರಾಗಿದ್ದ ಶರಣಬಸವರಾಜ ಪಾಟೀಲ್ ಆನ್ವರಿ 7 ವರ್ಷದ ಹಿಂದೆ ಗ್ರಾಮದಲ್ಲಿ 4 ಎಕರೆ ಜಮೀನನ್ನು ಕಾಲೇಜು ಹೆಸರಲ್ಲಿ ಮೀಸಲಿಟ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಜಿಲ್ಲಾ ಉಸ್ತುವಾರಿಯೂ ಆಗಿದ್ದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಮೇಲೆ ಒತ್ತಡ ತಂದು ಆನ್ವರಿ ಹಾಗೂ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆದಿದ್ದಾಗ ತಾಂತ್ರಿಕ ಕಾರಣಗಳಿಂದ ಮಂಜೂರಾತಿ ಸಿಕ್ಕಿರಲಿಲ್ಲ. ಆ ಬಳಿಕ ಪ್ರತಿವರ್ಷ ಕಾಲೇಜು ಮಂಜೂರಾತಿ ನಿರೀಕ್ಷೆ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿತ್ತು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಲೇಜು ಆರಂಭ ಪ್ರಕ್ರಿಯೆಗಳು ಚುರುಕು ಪಡೆದಿದ್ದರೂ ಸರ್ಕಾರ ಉರುಳಿದ್ದರಿಂದ ಹಿನ್ನಡೆಯಾಗಿತ್ತು. ನಂತರ ಬಿಜೆಪಿ ಸರ್ಕಾರ ಕಾಲೇಜು ಆರಂಭಕ್ಕೆ ಆದೇಶ ನೀಡಿದ್ದರೂ ಮುಂದಿನ ಕ್ರಮಗಳು ನಡೆಯಲಿಲ್ಲ.

ಆನ್ವರಿ ಹಾಗೂ ಗೌಡೂರು ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸುವ ಕುರಿತು ಮೂಲ ಸೌಕರ್ಯ ಹೊಂದಿರುವ ಮಾಹಿತಿ ರವಾನಿಸಬೇಕೆಂದು ಇಲಾಖೆ ಉಪ ನಿರ್ದೇಶಕಗೆ ನಿರ್ದೇಶಕರು 2020ರಲ್ಲಿ ಪತ್ರ ಬರೆದಿದ್ದರು.

ಇದರಿಂದಾಗಿ ಆನ್ವರಿಯೊಂದಿಗೆ ಗೌಡೂರಿನಲ್ಲೂ ಪದವಿಪೂರ್ವ ಕಾಲೇಜು ಆರಂಭವಾಗಲಿದೆ ಎಂಬ ಸಂಭ್ರಮ ಗ್ರಾಮದ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಮನೆ ಮಾಡಿತ್ತು. ಇದೀಗ ಆನ್ವರಿ ಗ್ರಾಮಕ್ಕೆ ಮಾತ್ರ ಕಾಲೇಜು ಮಂಜೂರು ಮಾಡಲಾಗಿದೆ.

ಅಗತ್ಯವಾದರೂ ಆಸಕ್ತಿ ತೋರದ ಶಿಕ್ಷಣ ಇಲಾಖೆ

ಆನ್ವರಿ ಹಾಗೂ ಗೌಡೂರಿನಲ್ಲಿ ಪ್ರೌಢಶಾಲೆಯನ್ನು ಉನ್ನತೀಕರಿಸಲು ಕೊಠಡಿಗಳು ಹಾಗೂ ಸ್ಥಳದ ಅವಕಾಶ ಇದೆ. ಆನ್ವರಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಗೆ 120 ವಿದ್ಯಾರ್ಥಿಗಳು, ನಿಲೋಗಲ್ ಗ್ರಾಮದ ಪ್ರೌಢಶಾಲೆಯಲ್ಲಿ 80, ಗೆಜ್ಜಲಗಟ್ಟಾ ಹಾಗೂ ನಿಲೋಗಲ್ ಕ್ರಾಸ್ ಸೇರಿ 120, ಗೌಡೂರು, ಯಲಗಟ್ಟಾ, ರೋಡಲಬಂಡಾ ಪ್ರೌಢಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಗ್ರಾಮದ ವಿದ್ಯಾರ್ಥಿಗಳು ಹಟ್ಟಿ, ಕವಿತಾಳ, ಗುರುಗುಂಟಾ, ಲಿಂಗಸುಗೂರಿನ ಕಾಲೇಜಿಗೆ ತೆರಳುತ್ತಾರೆ. ಗೌಡೂರು, ಗೌಡೂರು ತಾಂಡ, ಮಾಚನೂರು, ಯಲಗಟ್ಟಾ, ಬೆಂಚಲದೊಡ್ಡಿ, ಬಂಡೇಬಾವಿ ಹಾಗೂ ಸುತ್ತಲಿನ ಹಲವು ದೊಡ್ಡಿ, ತಾಂಡಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗೌಡೂರು ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಮಂಜೂರು ಆಗಬೇಕಿತ್ತು.

ಆನ್ವರಿಯಲ್ಲಿ ಪ.ಪೂ ಕಾಲೇಜು ಆರಂಭಿಸುವುದರಿಂದ ಸುತ್ತಲಿನ 8ರಿಂದ 10 ಹಳ್ಳಿಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿದ್ದ ಆದೇಶದಂತೆ ಆಯಾ ಗ್ರಾಮಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ಕಾಲೇಜು ಆರಂಭಿಸಲು ಶಾಸಕ ಹಾಗೂ ಸಂಸದರ ಮೂಲಕ ಒತ್ತಡ ತರಲಾಗುವುದು.| ಬಸವರಾಜ ಪಾಟೀಲ್ ಆನ್ವರಿ, ಕೇಂದ್ರದ ಮಾಜಿ ಸಚಿವ, ಆನ್ವರಿ ಗೌಡೂರಿಗೆ ಕಾಲೇಜು ಮಂಜೂರಾಗದೆ ಇರುವುದರಿಂದ ಗ್ರಾಮದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಗ್ರಾಮದಲ್ಲಿ ನಾವು ಜಮೀನು ನೀಡಿ ಸವಲತ್ತು ಒದಗಿಸಲು ಸಿದ್ಧರಿದ್ದರೂ ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಕ್ರಮ ವಹಿಸದಿರುವುದು ನಮಗೆ ತೀವ್ರ ಬೇಸರ ತರಿಸಿದೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಗ್ರಾಮದಲ್ಲಿ ಕಾಲೇಜು ಆರಂಭಿಸಲು ಕ್ರಮಕೈಗೊಳ್ಳಬೇಕು.| ರಾಜಾಸೇತುರಾಂ ನಾಯಕ್, ತಾಪಂ ಮಾಜಿ ಸದಸ್ಯ, ಗೌಡೂರು ಕಾಲೇಜು ಆರಂಭಿಸುವ ಉದ್ದೇಶದಿಂದ ಆದೇಶ ಹೊರಡಿಸಿದ್ದ ಗ್ರಾಮಗಳಲ್ಲಿ ಸೌಲಭ್ಯ ಕುರಿತು ಸರ್ಕಾರಕ್ಕೆ ವಿವರ ನೀಡಿ, ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಆನ್ವರಿಗೆ ಮಾತ್ರ ಕಾಲೇಜು ಮಂಜೂರು ಆಗಿದ್ದು, ಗೌಡೂರು ಗ್ರಾಮಕ್ಕೆ ಅನುಮತಿ ಸಿಕ್ಕಿಲ್ಲ. ಮುಂಬರುವ ಶೈಕ್ಷಣಿಕ ವರ್ಷದಿಂದ ತರಗತಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು.| ಸೋಮಶೇಖರಪ್ಪ ಹೊಕ್ರಾಣಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net