ಬೇಡ ಜಂಗಮರ ಎಸ್ಸಿ ಸೇರ್ಪಡೆ ಖಂಡಿಸಿದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮೀಸಲಾತಿ ಸಂರಕ್ಷಣಾ ಸಮಿತಿ

110802022 mnv
Published on

ಮಾನ್ವಿ: ವೀರಶೈವ ಲಿಂಗಾಯತ ಜಂಗಮರು ಕಾನೂನು ಬಾಹಿರವಾಗಿ ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವುದನ್ನು ಖಂಡಿಸಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಗುರುವಾರ ಪಟ್ಟಣದ ವಾಲ್ಮೀಕಿ ವೃತ್ತದಿಂದ ತಹಸೀಲ್ ಕಚೇರಿವರಗೆ ಪ್ರತಿಭಟನಾರ‌್ಯಾಲಿ ನಡೆಸಿ, ತಹಸೀಲ್ದಾರ್ ಎಲ್.ಡಿ ಚಂದ್ರಕಾಂತಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ವೀರಶೈವ ಜಂಗಮರು ಬೇಡ ಜಂಗಮರೆಂದು ಹೇಳಿಕೊಂಡು ಎಸ್ಸಿ ಪ್ರಮಾಣ ಪತ್ರಕ್ಕಾಗಿ ಹೋರಾಡುವ ಮೂಲಕ ಸುಳ್ಳನ್ನು ಸತ್ಯವಾಗಿಸಲು ಹೊರಟಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುತ್ತಾರೆ. ಮೀಸಲಾತಿಯನ್ನು ಕೆಲ ಉನ್ನತ ಸ್ಥಾನದವರು ಕಬಳಿಸಲು ಹೊಂಚು ಹಾಕುತ್ತಿರುವುದು ಸರಿಯಲ್ಲ.
ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ದೇಶದಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ. ದಲಿತರು ಈಗಲೂ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ದುರ್ಬಲವಾಗಿದಿದ್ದಾರೆ. ವೀರಶೈವ ಲಿಂಗಾಯತ ಜಂಗಮರು ನಮಗೂ ಎಸ್ಸಿ ಪ್ರಮಾಣ ಪತ್ರ ಕೊಡಿ ಎಂದು ಕೆಲ ಮಠಾಧೀಶರ ನೇತೃತ್ವದಲ್ಲಿ ಸತ್ಯಪ್ರತಿಪಾದನಾ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಪರಿಶಿಷ್ಟ ಜನಾಂಗದವರ ಹಕ್ಕು ಕಸಿಯಲು ನಡೆಸುತ್ತಿರುವ ಹುನ್ನಾರ ಎಂದು ದೂರಿದರು.
ದಕ್ಷಿಣ ಭಾರತದ ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಬೇಡ ಬುಡ್ಗ ಜಂಗಮರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು, ಸಂವಿಧಾನ ಮತ್ತು ಕಾನೂನು ಬಾಹಿರ. ಆದರೆ ಕರ್ನಾಟಕದಲ್ಲಿ ಮಾತ್ರ ಬೇಡ ಎಂಬ ಪದವು ಹಾಕಿ ಬುಡ್ಗ ಜಂಗಮ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ, ವೀರಶೈವ ಲಿಂಗಾಯತ ಜಂಗಮರಿಗೆ ಯಾವುದೆ ಕಾರಣಕ್ಕೂ ಎಸ್ಸಿ ಪ್ರಮಾಣ ಪತ್ರವನ್ನು ಕೊಡಬಾರದು. ಈಗಾಗಲೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದನ್ನು ರದ್ದುಪಡಿಸಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಎಸ್ಸಿ-ಎಸ್ಟಿ ಮೀಸಲಾತಿ ಸಂರಕ್ಷಣಾ ಸಮಿತಿ ಮುಖಂಡರಾದ ಬುಡ್ಡಪ್ಪ ನಾಯಕ, ಎಚ್.ಹನುಮಂತ ಸೀಕಲ್, ಬಸವರಾಜ ನಕ್ಕುಂದಿ, ರಾಮಣ್ಣ ನಾಯಕ, ಪರಶುರಾಮ ಬಾಗಲವಾಡ, ಭೀಮಣ್ಣ ಕುರ್ಡಿ, ಹನುಮಂತ್ರಾಯ ಕಪಗಲ್, ಲಕ್ಷ್ಮಣ ಜಾನೇಕಲ್, ದುರುಗಪ್ಪ ವಿಭೂತಿ,ನರಸಪ್ಪ ಜೂಕೂರು, ಯಲ್ಲಪ್ಪ ಬಾದರದಿನ್ನಿ ವಕೀಲರು, ಹನುಮೇಶ ನಾಯಕ ಸಾದಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net