

ಮಂಗಳೂರು: ನಿರೂಪಕಿ, ನಟಿ ಅನುಶ್ರೀ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಮತ್ತೆ ಕರೆಯುವ ಸಾಧ್ಯತೆ ಕಡಿಮೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾದಕ ವಸ್ತು ಎಂಡಿಎಂಎ ಮಾರಾಟ ಆರೋಪದಲ್ಲಿ ಬಂಧಿತ ಡ್ಯಾನ್ಸರ್ ಕಿಶೋರ್ ಹಾಗೂ ಅಕೀಲ್ ನೌಶೀಲ್ ಅವರೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ಸೆ.26ರಂದು ಪಣಂಬೂರು ಎಸಿಪಿ ಕಚೇರಿಯಲ್ಲಿ ವಿಚಾರಣೆ ನಡೆದಿತ್ತು. 12 ವರ್ಷದ ಹಿಂದೆ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದರಿಂದ ಅವರ ಪರಿಚಯ ಇದೆ ಹೊರತು ಅವರ ಜತೆ ಸಂಪರ್ಕದಲ್ಲಿ ಇಲ್ಲ, ಡ್ರಗ್ಸ್ ಪಾರ್ಟಿಗಳಲ್ಲೂ ಭಾಗಿಯಾಗಿಲ್ಲ ಎಂದು ಅನುಶ್ರೀ ತಿಳಿಸಿದ್ದರು. ವಿಚಾರಣೆಯಲ್ಲಿ ಅನುಶ್ರೀ ನೀಡಿದ ಮಾಹಿತಿ ಮತ್ತು ಇಡೀ ಪ್ರಕರಣದ ತನಿಖೆಯನ್ನು ಆಧರಿಸಿ ಪೊಲೀಸರು ಅವರನ್ನು ಮತ್ತೆ ವಿಚಾರಣೆ ನಡೆಸದಿರುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ರಾಜಕಾರಣಿಗಳಿಗೆ ಕರೆ?: ಡ್ರಗ್ಸ್ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ನೋಟಿಸ್ ಜಾರಿ ಮಾಡಿದ ದಿನ ಹಾಗೂ ಮರುದಿನ ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಅನುಶ್ರೀ ಕರೆ ಮಾಡಿ, ಅವರ ಮೂಲಕ ಏನೂ ತೊಂದರೆಯಾಗದಂತೆ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಒತ್ತಡ ಹೇರಿದ್ದರು. ಹಾಗಾಗಿ ಡೋಪಿಂಗ್ ಟೆಸ್ಟ್ ಕೂಡ ನಡೆಸಿಲ್ಲ ಎನ್ನಲಾಗುತ್ತಿದೆ. ಆದರೆ ಸಿಸಿಬಿ ಪೊಲೀಸರು ಈ ವಿಚಾರವನ್ನು ಅಲ್ಲಗಳೆದಿದ್ದಾರೆ.