ಚಕ್ರಾಸನ ರೇಸ್​ನಲ್ಲಿ ತನುಶ್ರೀ ವಿಶ್ವ ದಾಖಲೆ

Tanushree
Published on

ಉಡುಪಿ: ಹನ್ನೊಂದು ವರ್ಷದ ಯೋಗ ಪ್ರತಿಭೆ ತನುಶ್ರೀ ಪಿತ್ರೋಡಿ ಯೋಗಾಸನದಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.

ಚಕ್ರಾಸನ ರೇಸ್​ನಲ್ಲಿ(ಚೇಳಿನಂತೆ ಬಾಗಿ ಕೈ ಮತ್ತು ತಲೆ ಮುಂದೆ ಮಾಡಿ) 100 ಮೀ. ದೂರವನ್ನು 1 ನಿಮಿಷ 14 ಸೆಕೆಂಡ್​ನಲ್ಲಿ ಗುರಿಮುಟ್ಟುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಟಕ್ಕೆ ಸೇರಿದ್ದಾರೆ. ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಎಂಬವರು 100 ಮೀಟರನ್ನು 6 ನಿಮಿಷ 2 ಸೆಕೆಂಡ್​ನಲ್ಲಿ ದಾಖಲೆ ಮಾಡಿದ್ದರು. ಇದೀಗ 1 ನಿಮಿಷ 14 ಸೆಕೆಂಡ್​ಗಳಲ್ಲಿ ತನುಶ್ರೀ ಆ ದಾಖಲೆ ಮುರಿದಿದ್ದಾರೆ ಎಂದು ಅಮೆರಿಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥ ಡಾ.ಮನೀಷ್ ವಿಷ್ಣೋಯಿ ತಿಳಿಸಿದ್ದಾರೆ. ವೆಂಕಟರಮಣ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಸಹಯೋಗದೊಂದಿಗೆ ಉದ್ಯಾವರ ಗ್ರಾಪಂ ಮೈದಾನದಲ್ಲಿ ಆಯೋಜಿಸಿದ್ದ ಪ್ರದರ್ಶನದಲ್ಲಿ ತನುಶ್ರೀ ಯೋಗದ ಕಠಿಣ ಮುದ್ರೆಯಾಗಿರುವ ಚಕ್ರಾಸನದಲ್ಲಿ ಈ ದಾಖಲೆ ಬರೆದಿದ್ದಾರೆ.

ಐದು ವಿಶ್ವ ದಾಖಲೆ: ಉದಯ ಕುಮಾರ್ ಮತ್ತು ಸಂಧ್ಯಾ ದಂಪತಿ ಪುತ್ರಿ, ಉಡುಪಿಯ ಸೇಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಬುಕ್ ಆಫ್ ವರ್ಲx ರೆಕಾರ್ಡ್, ಗಿನ್ನೆಸ್ ದಾಖಲೆಯಲ್ಲಿ ಐದು ವಿಶ್ವ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರತಿಭಾನ್ವಿತ ಬಾಲಕಿ ತನುಶ್ರೀ ಯೋಗ, ಭರತನಾಟ್ಯ, ನೃತ್ಯದ ಜತೆಗೆ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net