

ಅಂಕೋಲಾ: ಪುಸ್ತಕ ಓದುವುದರಿಂದ, ಭಾಷಣ ಕೇಳುವುದರಿಂದ ಪರಿಸರ ಜಾಗೃತಿ ಉಂಟಾಗುವುದಿಲ್ಲ. ಕಡಲ ಕಿನಾರೆ, ನದಿ ತೀರಗಳು, ದಟ್ಟಾರಣ್ಯ ಮತ್ತು ಪರ್ವತ ಶ್ರೇಣಿಗಳಲ್ಲಿ ಖುದ್ದಾಗಿ ತಿರುಗಾಡಿ ಅನುಸಂಧಾನ ನಡೆಸಿದಾಗ ಪರಿಸರ ಪ್ರೀತಿ, ಅರಣ್ಯ ರಕ್ಷಣೆಯ ಒಲವು ಜಾಗೃತಗೊಳ್ಳುತ್ತದೆ ಎಂದು ಕೆನರಾ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ. ಕಾಮತ ಹೇಳಿದರು.
ಇಲ್ಲಿಯ ಜಿ.ಸಿ. ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ, ಅರಣ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ದಿನಕರ ಸಸ್ಯೋದ್ಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇ ಎ.ಗೌಡ ಮಾತನಾಡಿ, ವಾಯುಮಾಲಿನ್ಯಕ್ಕೆ ಇಂಗಾಲದ ಡೈಆಕ್ಸೈಡ್ ಹೆಚ್ಚಳವೊಂದೇ ಕಾರಣವಲ್ಲ.
ಅರಣ್ಯ ನಾಶವು ಕಾರಣ. ಮರಗಳನ್ನು ಕಡಿಯುವ ಬದಲು ಮರಗಳನ್ನು ನೆಟ್ಟರೆ ಮಾಲಿನ್ಯ ಕಡಿಮೆ ಮಾಡಬಹದು. ವಿದ್ಯಾರ್ಥಿಗಳು ತಮ್ಮ ಜನ್ಮದಿನದ ಅಂಗವಾಗಿ ಗಿಡಗಳನ್ನು ನೆಟ್ಟು ಪರಿಸರ ಪ್ರೇಮಿಗಳಾಬೇಕು ಎಂದರು.
ಟ್ರಸ್ಟ್ ವತಿಯಿಂದ ಎಸಿಎಫ್ ಕೃಷ್ಣೇ ಗೌಡ, ಆರ್ಎಫ್ಒ ಜಿ.ವಿ. ನಾಯಕರನ್ನು ಸನ್ಮಾನಿಸಲಾಯಿತು. ಟ್ರಸ್ಟಿಗಳಾದ ಕೆ.ವಿ. ಶೆಟ್ಟಿ, ಡಾ.ದಿನಕರ ದೇಸಾಯಿಯವರ ಮೊಮ್ಮಗ ರಂಜಿತ ಪ್ರಧಾನ, ಡಾ.ವಿ.ಎನ್. ನಾಯಕ, ಡಾ. ಕೃಷ್ಣ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಪಶ್ಚಿಮ ಘಟ್ಟದ ವಿಶಿಷ್ಟ ಸಸಿಗಳನ್ನು ಸಂಸ್ಥೆಯ ವಸತಿ ನಿಲಯದ ಎದುರಿನ ಸ್ಥಳದಲ್ಲಿ ನೆಡಲಾಯಿತು.
ವಿದ್ಯಾರ್ಥಿ ಪ್ರತೀಕ್ಷಾ ಸಂಗಡಿಗರು ಪ್ರಾರ್ಥಿಸಿದರು, ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಆರ್.ಪಿ. ಭಟ್, ಹರಿಪ್ರಸಾದ ದೇಸಾಯಿ ನಿರ್ವಹಿಸಿದರು. ಉಪನ್ಯಾಸಕರಾದ ವಿ.ಎಂ. ನಾಯ್ಕ, ಡಾ. ಪ್ರವೀಣ ನಾಯ್ಕ, ಮಂಜು ಪಾಟೀಲ, ಸುಂಗಧ ನಾಯಕ, ಪಿ.ಪಿ. ಕುಚಿನಾಡು, ವೀಣಾ ತೊರ್ಕೆ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.