

ಮಂಡ್ಯ: ಕಳೆದ ಮೂವತ್ಮೂರು ವರ್ಷದಿಂದ ಸಾಮಾಜಿಕ ಸೇವೆ ಮೂಲಕ ಗುರುತಿಸಿಕೊಂಡಿರುವ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಅವರಿಗೆ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಗರಿ ಮುಡಿಗೇರಿದೆ.
ಅನನ್ಯ ಹಾರ್ಟ್ ಸಂಸ್ಥೆ(ಅನನ್ಯ ಆರೋಗ್ಯ, ಶಿಕ್ಷಣ, ಪರಿಸರ ಜಾಗೃತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ)ಮೂಲಕ ಮಹಿಳಾ ಸಬಲೀಕರಣ ಕಾರ್ಯಕ್ರಮ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ನಗರದ ಗುತ್ತಲು ಕಾಲನಿಯಲ್ಲಿ ವಾಸವಿರುವ ಬಿ.ಎಸ್.ಅನುಪಮಾ, 22 ಹರೆಯದಲ್ಲಿಯೇ ರಾಷ್ಟ್ರೀಯ ಯುವ ಪ್ರಶಸ್ತಿಗೆ ಭಾಜನರಾಗಿದ್ದು ಹೆಮ್ಮೆಯ ವಿಷಯ. ಅದು ಕೂಡ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿಯೂ ಆಗಿದ್ದು ಹೆಗ್ಗಳಿಕೆ ಹೊಂದಿದ್ದಾರೆ.
2006ರಲ್ಲಿ ಅನನ್ಯ ಸಂಸ್ಥೆಯನ್ನು ಪ್ರಾರಂಭಿಸಿದರು. ಅದರ ಮೂಲಕವೇ ವಿಭಿನ್ನ ಹಾಗೂ ಜನೋಪಯೋಗಿ ಚಟುವಟಿಕೆಗೆ ನಾಂದಿಯಾಡಿದರು. ಪ್ರಾರಂಭದ ದಿನಗಳು ಅಂದುಕೊಂಡಂತೆ ಸುಲಭವೇನೂ ಆಗಿರಲಿಲ್ಲ. ಆದರೂ ಛಲ ಬಿಡದ ಗಟ್ಟಿಗಿತ್ತಿಯಾಗಿದ್ದಾರೆ. ಮಂಡ್ಯದಲ್ಲಿ ರಕ್ತದಾನ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಹೆಚ್ಚು ಆಯೋಜಿಸಿರುವ ಹೆಗ್ಗಳಿಕೆ ಅನನ್ಯ ಸಂಸ್ಥೆಗಿದೆ. ಈವರೆಗೆ 150ಕ್ಕೂ ಹೆಚ್ಚು ರಕ್ತದಾನ ಶಿಬಿರ, ಸಾವಿರಾರೂ ಸಂಖ್ಯೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಮಾಡಲಾಗಿದೆ. ಪರಿಸರ ಕಾಳಜಿ ವಿಚಾರದಲ್ಲಿಯೂ ಮುಂದಿರುವ ಅನುಪಮಾ, ಪ್ರತಿ ವರ್ಷ ತಮ್ಮ ಸಂಸ್ಥೆ ನೇತೃತ್ವದಲ್ಲಿ ಅಸಂಖ್ಯಾತ ಗಿಡಗಳನ್ನು ನೆಡುತ್ತಾರೆ. ಇದಲ್ಲದೆ ಸ್ವಯಂ ಉದ್ಯೋಗ ತರಬೇತಿ ಆಯೋಜಿಸಿ ಮಹಿಳೆಯರು ಆರ್ಥಿಕ ಸದೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಲಿಗೆ, ಬ್ಯೂಟಿಪಾರ್ಲರ್, ಎಂಬ್ರಾಯಿಡಿಂಗ್, ಜುಮುಕಿ ತಯಾರು ಸೇರಿದಂತೆ ಹಲವು ಕೌಶಲತೆಗಳನ್ನು ಬೆಳೆಸುವ ನಿಟ್ಟಿನಲ್ಲಿ ತರಬೇತಿ ನಡೆಸುತ್ತಾರೆ. ಈವರೆಗೆ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಇದರ ಲಾಭ ಪಡೆದುಕೊಂಡಿದ್ದಾರೆ.
ಅನನ್ಯ ಸಂಸ್ಥೆಯಿಂದ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ ಖಜಾಂಚಿಯೂ ಆಗಿದ್ದ ಸತ್ಯಭಾಮಾ ಅವರು ಕ್ಯಾನ್ಸರ್ ರೋಗ ಕುರಿತಂತೆ ‘ಗೆದ್ದೆ ಗೆಲುವು ಒಂದು ದಿನ’ ಶೀರ್ಷಿಕೆಯಡಿ ಪುಸ್ತಕ ಬರೆದಿದ್ದರು. ಅದನ್ನು ಸಂಸ್ಥೆ ಮೂಲಕವೇ ಪ್ರಕಟಿಸಲಾಗಿದ್ದು, ಜನಮೆಚ್ಚುಗೆ ಪಡೆದುಕೊಂಡಿತ್ತು. ಇದಲ್ಲದೆ ಎಚ್‌ಐವಿ ಪೀಡಿತರು ಹಾಗೂ ಮಕ್ಕಳ ಪರವಾಗಿ ಕಾರ್ಯಕ್ರಮ ಮಾಡಿದ ಹಿರಿಮೆ ಸಂಸ್ಥೆಗಿದೆ. ಈಗಾಗಲೇ 25ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಕ್ ಆಫ್ ರೆಕಾರ್ಡ್ಸ್‌ನ ಪ್ರಶಂಸೆ
ಅನನ್ಯ ಸಂಸ್ಥೆಯ ಸಾಧನೆ ಹಾಗೂ ಸೇವೆಗೆ ಬುಕ್ ಆಫ್ ರೆಕಾರ್ಡ್ಸ್‌ನ ಪ್ರಶಂಸೆ ದೊರೆತಿವೆ. ಒಂದು ದೇಶ ಒಂದು ದಿನ ಒಂದು ಮಿಲಿಯನ್ ಪರೀಕ್ಷೆಯಡಿ ಆಯೋಜಿಸಿದ್ದ ಮಧುಮೇಹ ಕುರಿತ ಶಿಬಿರದಲ್ಲಿ ಮಾಡಿದ ಸಾಧನೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನ ಪುಟ ಸೇರಿದೆ. ಮತ್ತೊಂದೆಡೆ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿಯೂ ಗಮನಸೆಳೆದಿರುವ ಅನುಪಮಾ, ಒಂದು ವರ್ಷದ ಅವಧಿಯಲ್ಲಿ ಬರೋಬರಿ 235 ಕಾರ್ಯಕ್ರಮ ಆಯೋಜಿಸಿದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಈ ಅವಧಿಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವು ನೀಡಿದ್ದರು. ಈ ಹಿನ್ನೆಲೆಯಲ್ಲಿ 2024ರಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಅಧ್ಯಕ್ಷೆ ಎನ್ನುವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಷ್ಟು ವರ್ಷದ ಸಾಮಾಜಿಕ ಸೇವೆ ಪರಿಗಣಿಸಿ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣ ಪತ್ರ ನೀಡಿ ಅಭಿನಂದಿಸಿದೆ.