ಪಕ್ಷದ ಎಲ್ಲ ಹುದ್ದೆಗಳಿಂದ ಅನುಕುಮಾರ್‌ಗೆ ವಿಮುಕ್ತಿ

23MDG1
Published on

ಮೂಡಿಗೆರೆ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ಜಿ.ಅನುಕುಮಾರ್ ಅವರನ್ನು ಬಿಜೆಪಿಯ ಎಲ್ಲ ಜವಾಬ್ದಾರಿ ಹಾಗೂ ಹುದ್ದೆಗಳಿಂದ ವಿಮುಕ್ತಿ ಗೊಳಿಸಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ತಿಳಿಸಿದ್ದಾರೆ.

ಈ ಹಿಂದೆ ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ರಾಜೀನಾಮೆ ನೀಡಿದ ನಂತರ ಅನುಕುಮಾರ್ ಸೇರಿದಂತೆ 5 ಸದಸ್ಯರೊಂದಿಗೆ ಪಕ್ಷದ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಪಪಂಅಧ್ಯಕ್ಷ ಪದವಿಯನ್ನು ಬಿಜೆಪಿ ತೆಕ್ಕೆಗೆ ಪಡೆಯುವಂತೆ ರಣತಂತ್ರದ ಬಗ್ಗೆ ಮಾಹಿತಿ ನೀಡಲಾಗಿತ್ತು. ನಂತರ ಚುನಾವಣೆಗೂ 8 ದಿನಕ್ಕೂ ಮುನ್ನ ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ಪಿ.ಜಿ.ಅನು ಕುಮಾರ್ ಸೇರಿದಂತೆ ಪಪಂನ ಬಿಜೆಪಿ ಸದಸ್ಯರ ಮತ್ತೊಂದು ಸಭೆ ನಡೆಸಲಾಯಿತು. ಪಕ್ಷದ ತೀರ್ಮಾನಕ್ಕೆ ನಾಲ್ಕು ಸದಸ್ಯರು ಬದ್ಧರಾಗಿದ್ದು, ಅನುಕುಮಾರ್ ಎರಡು ದಿನಗಳ ಕಾಲಾವಕಾಶ ಪಡೆದು ಚುನಾವಣಾ ನೋಟಿಸ್ ಕೂಡ ಸ್ವೀಕರಿಸಿದ್ದರು.

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಪಕ್ಷದ ಸದಸ್ಯೆ ಆಶಾ ಮೋಹನ್ ಗೆಲ್ಲವ ಅವಕಾಶ ಇದ್ದುದ್ದರಿಂದ ಪಪಂ ಚುನಾವಣೆಯಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮತ ಚಲಾಯಿಸಲು ಆಗಮಿಸಿದ್ದರು. ಆದರೆ ಅನುಕುಮಾರ್ ಗೈರಾಗಿದ್ದರಿಂದ ಪಪಂ ಆಡಳಿತ ಕೈ ತಪ್ಪಿತ್ತು. ಈ ಹಿಂದೆ ಅನುಕುಮಾರ್ ಪಪಂ ಅಧ್ಯಕ್ಷರಾದಾಗ ಆಶಾ ಮೋಹನ್ ಅನುಕುಮಾರ್ ಪರವಾಗಿ ಮತ ಚಲಾಯಿಸಿದ್ದರು. ಅದರೆ ಈ ಬಾರಿಯ ಪಪಂ ಅಧ್ಯಕ್ಷರ ಚುನಾವಣೆಯಲ್ಲಿ ಸೌಜನ್ಯಕ್ಕೂ ಋಣ ತೀರಿಸಲು ಅನುಕುಮಾರ್ ಮುಂದಾಗಲಿಲ್ಲ. ಅಲ್ಲದೇ ಮತ ಚಲಾಯಿಸಲು ಬಂದ ಸಂಸದ ಕೋಟಾ ಶ್ರೀನಿವಾಸ್ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿಗೆ ಅಗೌರವ ಸೂಚಿಸಿದ್ದಾರೆ ಎಂದು ದೂರಿದ್ದಾರೆ.

ಗೈರಾದ ಬಗ್ಗೆ ಪಕ್ಷದ ಹಿರಿಯ ಮುಖಂಡರಿಗೆ ಸುಳ್ಳು ಮತ್ತು ಅಸಮರ್ಪಕ ಉತ್ತರ ನೀಡಿದ್ದಾರೆ. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದರೂ ಉತ್ತರಿಸಿಲ್ಲ. ಅನುಕುಮಾರ್ ನನಗೆ ಯಾರು ಮಾಹಿತಿ ನೀಡಿಲ್ಲ್ಲ , ಮಾತುಕತೆ ಕೂಡ ನಡೆಸಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಕಾರಣದಿಂದ ಅನುಕುಮಾರ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಿಮುಕ್ತಿ ಗೊಳಿಸಲಾಗಿದೆ ಎಂದು ಗಜೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net