ಕುರಿಗಾಹಿಗಳಿಗೆ ಸಿಗದ ಸರ್ಕಾರದ ಅನುಗ್ರಹ

Anugraha scheme not get to shepherds
Published on

ಶಿಗ್ಗಾಂವಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುಗ್ರಹ ಯೋಜನೆಗೆ ಈವರೆಗೆ ಅನುದಾನ ಬಿಡುಗಡೆಯಾಗದಿರುವುದರಿಂದ ಕುರಿಗಾಹಿಗಳು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಜಾರಿ ಮಾಡಿದ್ದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅನುಗ್ರಹ ಯೋಜನೆ ಒಂದು. ಆಕಸ್ಮಿಕವಾಗಿ ಕುರಿ, ಮೇಕೆಗೆ ಸತ್ತರೆ 3 ಸಾವಿರ ರೂಪಾಯಿ ಹಾಗೂ, ಎತ್ತು, ಎಮ್ಮೆ, ಹಸು ಮರಣ ಹೊಂದಿದರೆ 10 ಸಾವಿರ ರೂ. ನೆರವು ನೀಡುವ ಯೋಜನೆ ಇದಾಗಿತ್ತು. ನಂತರ ಕುರಿ, ಮೇಕೆಗೆ ನೀಡುವ ಮೊತ್ತವನ್ನು 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿತ್ತು.

2019ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಗ್ರಹ ಯೋಜನೆ ಸ್ಥಗಿತಗೊಂಡಿತ್ತು. ಹಾನಗಲ್ಲ ಕ್ಷೇತ್ರದ ಉಪ ಚುನಾವಣೆ ವೇಳೆ ಯೋಜನೆ ಸ್ಥಗಿತ ಬಗ್ಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದರಿಂದ ಎಚ್ಚೆತ್ತ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾನಗಲ್ಲ ಉಪ ಚುನಾವಣೆ ಪ್ರಚಾರದಲ್ಲಿ ಮತ್ತೆ ಅನುಗ್ರಹ ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದ್ದರು. ನಂತರ ಒಂದು ಬಾರಿ ಹಾವೇರಿ ಜಿಲ್ಲೆಗೆ ಅಲ್ಪ ಪರಿಹಾರ ಒದಗಿಸಿದ್ದರು. ಅದಾದ ನಂತರ ಡಿಸೆಂಬರ್ 2021ರಿಂದ ಏಪ್ರಿಲ್ 2023ರವರೆಗೆ ಅನುಗ್ರಹ ಯೋಜನೆಗೆ ಅನುದಾನ ಬಂದಿಲ್ಲ.

ಕಳೆದ ವರ್ಷ ಮತ್ತೆ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಮತ್ತೆ ಅನುಗ್ರಹ ಯೋಜನೆ ಮರು ಚಾಲನೆ ಘೋಷಣೆ ಮಾಡಿದ್ದಾರೆ. ಆದರೆ, ಇದುವರೆಗೂ ನಯಾಪೈಸೆ ಅನುದಾನ ನೀಡಿಲ್ಲ. ಕುರಿಗಾಹಿಗಳು, ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿ, ನೆರವಿಗೆ ಕಾಯುತ್ತಿದ್ದಾರೆ.

ಚಳಿ, ಮಳೆ ಎನ್ನದೇ ಹಗಲಿರುಳು ರೈತರ ಜಮೀನುಗಳಲ್ಲಿ ಕುರಿ ಮೇಯಿಸುತ್ತ ಬದುಕು ಕಟ್ಟಿಕೊಳ್ಳುತ್ತಿರುವ ಕುರಿಗಾಹಿಗಳು ಅತಿವೃಷ್ಟಿ, ರೋಗ, ಅಪಘಾತಗಳಂಥ ಅವಘಡಗಳಲ್ಲಿ ತಮ್ಮ ಕುರಿಗಳನ್ನು ಕಳೆದುಕೊಳ್ಳುತ್ತಾರೆ. ಇಂತಹವರಿಗೆ ಮತ್ತೆ ಕುರಿ ಕೊಳ್ಳುವುದಕ್ಕೆ ಸರ್ಕಾರ ನೀಡುವ ಪರಿಹಾರದ ಹಣ ಸಹಾಯವಾಗಲಿದೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಕುರಿ ಕಳೆದುಕೊಂಡಿರುವವರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಾಕಿ ಪರಿಹಾರ ಹಣ ನೀಡಬೇಕು ಎನ್ನುವುದು ಕುರಿಗಾಹಿಗಳ ಆಗ್ರಹವಾಗಿದೆ.

ಹಾವೇರಿ ಜಿಲ್ಲೆಗೆ 9 ಕೋಟಿ ರೂ. ಬಾಕಿ: ಹಾವೇರಿ ಜಿಲ್ಲೆಯ ಒಟ್ಟು 16,805 ಫಲಾನುಭವಿಗಳ 18,364 ಕುರಿ, ಮೇಕೆ ಮತ್ತು ಮರಿಗಳು ಸಾವಿಗೀಡಾಗಿವೆ. ಇದರ ಪರಿಹಾರ ಮೊತ್ತ 9.08 ಕೋಟಿ ರೂಪಾಯಿ ಬರಬೇಕಿದೆ. ಇದರಲ್ಲಿ ಶಿಗ್ಗಾಂವಿ ತಾಲೂಕಿನ 1554 ಕುರಿ, ಮೇಕೆಗಳ 76.62 ಲಕ್ಷ ರೂಪಾಯಿ ಪರಿಹಾರ ಸರ್ಕಾರ ನೀಡಬೇಕಾಗಿದೆ.

ಕಳೆದೆರಡು ದಿನಗಳ ಹಿಂದೆ ವಲಸೆ ಕುರಿಗಾರರ ಸಭೆ ನಡೆಸಿರುವ ಮುಖ್ಯಮಂತ್ರಿಗಳು, ಜಿಲ್ಲಾವಾರು ಸತ್ತ ಕುರಿಗಳ ಮಾಹಿತಿ ಪಡೆದು ಪರಿಹಾರದ ಭರವಸೆ ನೀಡಿದ್ದಾರೆ. ಅದರಂತೆ ಈ ಯೋಜನೆಯಡಿ ಸರ್ಕಾರ ಪರಿಹಾರ ನೀಡಿದರೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು.ಶಂಭುಲಿಂಗಪ್ಪ ಬಡ್ಡಿ, ಸಹಾಯಕ ನಿರ್ದೇಶಕ, ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮ ಹಾವೇರಿ ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಇತರ ಅವಘಡಗಳಿಂದ ಕುರಿಗಾರರು ಸಾಕಷ್ಟು ಕುರಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಪರಿಹಾರ ನೀಡಿದರೆ ಅದಕ್ಕೆ ಇನ್ನಷ್ಟು ಹಣ ಹೊಂದಿಸಿ ಮತ್ತೆ ಕುರಿ ಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರ ಕೂಡಲೇ ನಮ್ಮ ಬಾಕಿ ಹಣವನ್ನು ನಮ್ಮ ಖಾತೆಗೆ ಜಮೆ ಮಾಡಬೇಕು.ಮಂಜಪ್ಪ ಹಿರವೆ ಕುರಿಗಾಹಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net