

ದೊಡ್ಡಬಳ್ಳಾಪುರ: ಸರ್ಕಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ನೀಡುವಷ್ಟು ಆರ್ಥಿಕ ಸಹಕಾರವನ್ನು ಭಾರತ ಸೇವಾ ದಳಕ್ಕೆ ನೀಡುತ್ತಿಲ್ಲ ಎಂದು ಭಾರತ ಸೇವಾ ದಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿ.ದೇವಿಪ್ರಸಾದ್ ತಿಳಿಸಿದರು.
ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ಸೇವಾದಳಕ್ಕೆ ಸೂಕ್ತ ಅನುದಾನ ನೀಡುವ ಮೂಲಕ ರಾಜ್ಯದ ಎಲ್ಲ ಶಾಲೆಗಳಲ್ಲೂ ಸೇವಾದಳ ಶಾಖೆ ಆರಂಭಿಸಲು ಪ್ರೋತ್ಸಾಹ ನೀಡಬೇಕು ಎಂದರು.
ದೊಡ್ಡಬಳ್ಳಾಪುರಕ್ಕೆ ಹಿಂದಿನ ಸರ್ಕಾರಗಳು ನೀಡಿದ್ದ ಅನುದಾನ ಕಡಿತಗೊಳಿಸಿ ಯೋಜನೆ ತಡೆಹಿಡಿದಿರುವ ರಾಜ್ಯ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿ ಟೆಂಡರ್ ಹಂತದಲ್ಲಿದ್ದ 150 ಕೋಟಿ ರೂ. ಅನುದಾನ ಹಿಂದಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಶುದ್ಧೀಕರಿಸಿದ ನೀರನ್ನು ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕಿನ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವನೆ ಬೆಳೆಸುವಲ್ಲಿ ಸೇವಾದಳ ಮಹತ್ವದ ಪಾತ್ರವಹಿಸುತ್ತಿದೆ. ಪಠ್ಯ ಪುಸ್ತಕದ ಓದಿನ ಜತೆಗೆ ಇತರ ಕಲಿಕೆಯೂ ಮುಖ್ಯ ಎಂದರು.
ಸೇವಾದಳ ಸ್ಮರಣ ಸಂಚಿಕೆ ಹಾಗೂ ಕಿರು ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯಿತು, ದೇಶ ಭಕ್ತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಭಾರತ ಸೇವಾದಳ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಗುರುಸಿದ್ದಪ್ಪ, ರಾಜ್ಯ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್, ಕೇಂದ್ರ ಸಮಿತಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಅಧ್ಯಕ್ಷ ಡಾ.ಕೆ.ಎನ್.ಪ್ರಕಾಶ್, ತಾಲೂಕು ಅಧ್ಯಕ್ಷ ಕೆ.ಎನ್.ನಾಗೇಶ್, ಉಪಾಧ್ಯಕ್ಷ ಚನ್ನಕೃಷ್ಣ, ಕಾರ್ಯದರ್ಶಿ ಗಂಗಾಧರ್, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಬಿಇಒ ಬೈಯಪ್ಪರೆಡ್ಡಿ ಮತ್ತಿತರರಿದ್ದರು.
ಬಾರದ ಸಿ.ಎಂ: ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುವುದು ಕೊನೇ ಗಳಿಗೆಯಲ್ಲಿ ರದ್ದಾಯಿತು. ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.
ಮುಖ್ಯಮಂತ್ರಿಗಳಿಗಾಗಿ ಕಾರ್ಯಕ್ರಮ ಮುಂದೂಡಿ ಎರಡನೇ ಭಾರಿ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದ ಅಂತಿಮ ಘಳಿಗೆಯಲ್ಲಿ ಮುಖ್ಯಮಂತ್ರಿಗಳು ಬಾರದಿರುವುದು ಮಕ್ಕಳಲ್ಲಿ ನಿರಾಸೆ ಮೂಡಿಸಿದೆ. ಉಳಿದ ಎರಡು ದಿನಗಳ ಕಾರ್ಯಕ್ರಮಕ್ಕಾದರೂ ಮುಖ್ಯಮಂತ್ರಿಗಳು ಬರುವ ವಿಶ್ವಾಸವಿದೆ. ಎಚ್.ಎಸ್.ಚಂದ್ರಶೇಖರ್, ಭಾರತ ಸೇವಾದಳ ರಾಜ್ಯ ಘಟಕದ ವಿಭಾಗೀಯ ಸಂಘಟಕ ದಳಪತಿ