

ಬಳ್ಳಾರಿ : ಲೋಕದಲ್ಲಿ ಮನುಷ್ಯನು ಪಡೆಯುವ ಸಂವೇದನೆಗಳೇ ಅನುಭವಗಳು. ಲೋಕದ ಸಂವೇದನೆಗಳನ್ನು ಅಲೌಕಿಕ ಸ್ಥರದಲ್ಲಿ ತನ್ನದಾಗಿಸಿಕೊಳ್ಳುವುದೇ ಅನುಭಾವ. ಲೋಕದಲ್ಲಿ ಬಾಳಿದ ಹನ್ನೆರಡನೆಯ ಶತಮಾನದ ಶರಣರೆಲ್ಲ ಅನುಭವಿಗಳು ಎಂದು ಆಂಧ್ರಪ್ರದೇಶದ ಕೊಕ್ಕರಚೇಡಿನ ಶಂಕರಾನಂದಗಿರಿ ಗುರುಸೇವಾಶ್ರಮದ ಮಾತಾಜಿ ಶರಣಮ್ಮ ನುಡಿದರು.
ನಗರದ ಕೊಟ್ಟೂರುಸ್ವಾಮಿ ಮಠದ ಪ್ರಭುದೇವರಾಯ ಮಂಟಪದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 299ನೇ ಮಹಾಮನೆ ಕೋಳೂರು ಮೂಲೆಮಠದ ರುದ್ರಯ್ಯ ಪಾರ್ವತಮ್ಮ ದತ್ತಿ ಕಾರ್ಯಕ್ರಮದಲ್ಲಿ ‘ಅಕ್ಕನ ಅನುಭಾವದ ನೆಲೆಗಳು’ ವಿಷಯ ಕುರಿತು ಮಾತನಾಡಿದರು.
ಮಹಾದೇವಿಯು ಲೌಕಿಕವಾಗಿ ಪಡೆದ ಎಲ್ಲ ಅನುಭವಗಳನ್ನು ತನ್ನ ಅಲೌಕಿಕ ಗಂಡ ಚೆನ್ನಮಲ್ಲಿಕಾರ್ಜುನನೊಂದಿಗೆ ಸಮೀಕರಿಸಿಕೊಂಡು ಅನುಭಾವಿಯಾಗಿ ಬಾಳಿದಳು. ಜಗದ ಕಣ್ಣಿನಲ್ಲಿ ಅಕ್ಕ, ನಮ್ಮಕ್ಕ, ಜಗದಕ್ಕೆ ಎನಿಸಿಕೊಂಡಳು. ಜಗದ ಜಂಜಾಟಗಳಿಂದ ತಪ್ಪಿಸಿಕೊಳ್ಳುವುದು ನಮ್ಮ ಮಾರ್ಗವಾಗಬಾರದು. ಜಂಜಾಟಗಳನ್ನು ಜಗದಾಟವೆಂದು ಭಾವಿಸಿ ಅವುಗಳಲ್ಲಿ ಜಗದೀಶನನ್ನು ಕಾಣುವ ಪ್ರಯತ್ನ ಮಾಡಬೇಕೆಂದರು.
ಕಲ್ಯಾಣ ಸ್ವಾಮಿ ಮಾತನಾಡಿ, ಶರಣರ ತತ್ವಾದರ್ಶಗಳನ್ನು ಓದುವುದು, ಕೇಳುವುದು ಮಾತ್ರವಲ್ಲ. ಅವುಗಳನ್ನು ಹಂತಹಂತವಾಗಿ ಕಾರ್ಯಾಚರಣೆಯಲ್ಲಿ ತಂದುಕೊಂಡು ಅನುಭಾವಿಗಳಾಗಬೇಕೆಂದರು.
ಸೋಮಸಮುದ್ರದ ವಿರಕ್ತಮಠದ ಸಿದ್ದಲಿಂಗ ದೇಶಿಕರು ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ತಂದೆ ತಾಯಿಗಳೇ ಆದರ್ಶವಾಗಿ ಅವರ ಬದುಕನ್ನು ತಿದ್ದುವುದರ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿಸಬೇಕೆಂದರು.
ದೂರದರ್ಶನ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸುಧಾಕರರಾವ್, ದತ್ತಿ ದಾಸೋಹಿಗಳಾದ ಮಾತೋಶ್ರೀ ಕೋಳೂರು ಪಾರ್ವತಮ್ಮ, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ , ಗಣಿ ಮಾಲೀಕ ಕೆ.ಎಂ.ವಿಶ್ವನಾಥ್ ಮತ್ತಿತರರಿದ್ದರು.